ಮುಳ್ಳೂರು, ಜ. ೮: ಸಮೀಪದ ಗೋಪಾಲಪುರ ಗ್ರಾಮದಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಶುಕ್ರವಾರ ಬನದ ಹುಣ್ಣಿಮೆ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ಶ್ರೀ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ಅರ್ಚಕರು ಶ್ರೀ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಶ್ರೀ ಸೂಕ್ತ, ದುರ್ಗಾಸೂಕ್ತ ಹಾಗೂ ದೇವಿ ಸೂಕ್ತ, ಮಹಾಭಿಷೇಕ ವಿದಿ ವಿಧಾನಗಳನ್ನು ನೆರವೇರಿಸಿದ ನಂತರ ಗರ್ಭಗುಡಿಯಲ್ಲಿರುವ ದೇವರ ವಿಗ್ರಹಗಳಿಗೆ ಅಲಂಕಾರ ಮಾಡುವುದರ ಮೂಲಕ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಬೆಳಿಗ್ಗೆ ೯ ಗಂಟೆಗೆ ಮಹಾಗಣಪತಿ ಪೂಜೆ, ಪುಣ್ಯಾಹ, ಋತ್ವಿಕ್ ವರ್ಣ, ಕಲಶಾರಾಧನೆ ಕಾರ್ಯ ನೆರವೇರಿಸಲಾಯಿತು. ಬನದ ಹುಣ್ಣಿಮೆ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆ ೧೦.೩೦ ರಿಂದ ಶ್ರೀ ಗಣಪತಿ ಹೋಮ, ನವಗ್ರಹ ಹೋಮ ಹಾಗೂ ಶ್ರೀ ದುರ್ಗಾಹೋಮ ಮುಂತಾದ ಹೋಮ ಹವನ ನೆರವೇರಿಸಲಾಯಿತು. ಮಧ್ಯಾಹ್ನ ೧೨.೩೦ ರಿಂದ ೧.೧೫ ರವರೆಗೆ ದೇವರಿಗೆ ವಿಶೇಷ ಪೂಜೆ, ಪೂರ್ಣಾಹುತಿ, ಮಹಾ ಮಂಗಳಾರತಿ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಬನದ ಹುಣ್ಣಿಮೆ ಪೂಜಾ ಮಹೋತ್ಸವ ಸಂಪನ್ನಗೊAಡಿತು.
ಅರ್ಚಕರಾದ ಕೆ.ಎಸ್. ಪ್ರಸನ್ನ ಮತ್ತು ಎನ್.ಕೆ. ನಾಗೇಶ್ ನೇತೃತ್ವದಲ್ಲಿ ಅರ್ಚಕರ ತಂಡ ಧಾರ್ಮಿಕ ಪೂಜಾ ವಿದಿ ವಿಧಾನ ನೆರವೇರಿಸಿದರು. ಬನದ ಹುಣ್ಣಿಮೆ ಪೂಜಾ ಮಹೋತ್ಸವದಲ್ಲಿ ಗೋಪಾಲಪುರ, ಶನಿವಾರಸಂತೆ ಸೇರಿದಂತೆ ಅಕ್ಕಪಕ್ಕ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು. ಬನದ ಹುಣ್ಣಿಮೆ ಮಹೋತ್ಸವದ ಅಂಗವಾಗಿ ದೇವಾಲಯ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಜಿ.ಎಸ್. ಪ್ರಕಾಶ್, ಕಾರ್ಯದರ್ಶಿ ಜಿ.ಟಿ. ಗಣೇಶ್ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.