ಸೋಮವಾರಪೇಟೆ, ಜ. ೮: ತಾಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ೬೪ನೇ ವರ್ಷದ ಮಹಾ ರಥೋತ್ಸವ ಅಂಗವಾಗಿ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ಆಶ್ರಯದಲ್ಲಿ ಪ್ರಥಮ ವರ್ಷದ ಅಂತರ್ ಜಿಲ್ಲಾಮಟ್ಟದ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ.
ಇದರೊಂದಿಗೆ ಜಾತ್ರೋತ್ಸದ ಆಕರ್ಷಣೆಯಾಗಿ ಇತರ ಗ್ರಾಮೀಣ ಕ್ರೀಡಾಕೂಟಗಳನ್ನು ನಡೆಸಲು ಸಿದ್ಧತೆ ಕೈಗೊಳ್ಳಲಾಗಿದ್ದು, ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ತಂಡಗಳು ಭಾಗಿಯಾಗಲಿವೆ ಎಂದು ಸಂಘದ ಅಧ್ಯಕ್ಷ ಸಜನ್ ಮಂದಣ್ಣ ತಿಳಿಸಿದ್ದಾರೆ.
ತಾ. ೧೫ ಮತ್ತು ೧೬ ರಂದು ಎರಡು ದಿನಗಳ ಕಾಲ ಶಾಂತಳ್ಳಿಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ರೀಡಾಕೂಟಗಳು ನಡೆಯಲಿವೆ. ತಾ. ೧೫ರಂದು ಮಹಿಳೆಯರು ಮತ್ತು ಪುರುಷರ ಪ್ರತ್ಯೇಕ ವಿಭಾಗಗಳಲ್ಲಿ ಅಂತರ್ ಜಿಲ್ಲಾ ಮಟ್ಟದ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಪಂದ್ಯಾಟ, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ನಡೆಯಲಿದ್ದು, ತಾ. ೧೬ರಂದು ಇದೇ ಪ್ರಥಮ ಬಾರಿಗೆ ಮ್ಯಾಟ್ ಕಬಡ್ಡಿ ನಡೆಯಲಿದೆ.
ಕಬಡ್ಡಿ ಪಂದ್ಯಾಟದ ಪ್ರಥಮ ಬಹುಮಾನ ರೂ. ೫೦ ಸಾವಿರ ನಗದು, ದ್ವಿತೀಯ ೩೦ ಸಾವಿರ ನಗದು, ತೃತೀಯ ೧೦ ಸಾವಿರ, ಚತುರ್ಥ ೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು.
ಥ್ರೋಬಾಲ್ನಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ ೧೦ ಸಾವಿರ ನಗದು, ದ್ವಿತೀಯ ೫ ಸಾವಿರ, ವಾಲಿಬಾಲ್ ಪ್ರಥಮ ೧೦ ಸಾವಿರ, ದ್ವಿತೀಯ ೫ ಸಾವಿರ ಹಾಗೂ ಆಕರ್ಷಕ ಟ್ರೋಫಿ, ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ೮ ಸಾವಿರ, ದ್ವಿತೀಯ ೫ ಸಾವಿರ ನಗದು ಬಹುಮಾನ ನೀಡಲಾಗುವುದು.
ವಾಲಿಬಾಲ್, ಹಗ್ಗಜಗ್ಗಾಟ ಮತ್ತು ಥ್ರೋಬಾಲ್ ತಂಡಗಳು ತಾ. ೧೫ರಂದು ಬೆಳಿಗ್ಗೆ ೧ ಗಂಟೆಯ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಕಬಡ್ಡಿ ತಂಡಗಳು ತಾ. ೧೬ರ ಬೆಳಿಗ್ಗೆ ೧ ಗಂಟೆಯ ಒಳಗೆ ಹೆಸರು ನೋಂದಾವಣೆ ಮಾಡಿಕೊಳ್ಳಬೇಕು. ನಂತರ ಬರುವ ತಂಡಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ೯೪೮೦೭೮೮೪೨೬, ೮೨೭೭೯೧೨೭೧೦ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಸಜನ್ ಮಂದಣ್ಣ ತಿಳಿಸಿದ್ದಾರೆ.