ಕೊಡ್ಲಿಪೇಟೆ, ಜ.೯ : ಕೊಡ್ಲಿಪೇಟೆ, ಹಂಡ್ಲಿ, ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್, ಕಾವೇರಿ ನೀರಾವರಿ ನಿಗಮದಿಂದ ಕೈಗೊಳ್ಳಲು ಉದ್ದೇಶಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ೪೦ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ಕಿತ್ತೂರು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ, ನಾಕಲಗೋಡು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ, ತಾಳೂರು ಕಾಲೋನಿ ರಸ್ತೆಗಳಿಗೆ ಶಾಸಕರು ಚಾಲನೆ ನೀಡಿದರು. ಇದೇ ಸಂದರ್ಭ ಮಣಗಲಿಯಲ್ಲಿ ೧೭ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು.

ಕೊಡ್ಲಿಪೇಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತಲಾ ೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಶಾಂತಪುರ-ಅರ್ಕನಳ್ಳಿ ಎಸ್‌ಸಿ ಕಾಲೋನಿ ರಸ್ತೆ, ಶಾಂತಪುರ ಗ್ರಾಮದ ಮುಖ್ಯರಸ್ತೆ ಕಾಂಕ್ರಿಟೀಕರಣ, ೩೦ ಲಕ್ಷ ವೆಚ್ಚದ ದೊಡ್ಡಕೊಡ್ಲಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ, ೪೦ ಲಕ್ಷ ವೆಚ್ಚದ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕರು, ರೂ. ೧೭ ಲಕ್ಷದಲ್ಲಿ ನಿರ್ಮಿಸಲಾಗಿರುವ ಕೊಡ್ಲಿಪೇಟೆ ಮಸೀದಿ ಬೀದಿ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು.

ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ.೧.೨೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಬೆಸೂರು ಕಟ್ಟೆಪುರ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಕಾಂಕ್ರಿಟೀಕರಣ, ೪೦ ಲಕ್ಷ ವೆಚ್ಚದ ಕಾಫಿ ಕಣ ಕಾಲೋನಿ ರಸ್ತೆ ಕಾಂಕ್ರಿಟೀಕರಣಕ್ಕೆ ಚಾಲನೆ ನೀಡಿದ ಶಾಸಕ ರಂಜನ್ ಅವರು, ಮನುಗನಹಳ್ಳಿ ಯಲ್ಲಿ ನಿರ್ಮಾಣವಾಗಿರುವ ೧೭ ಲಕ್ಷ ವೆಚ್ಚದ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು.