ಮಡಿಕೇರಿ, ಜ. ೯: ಇನ್ನು ಮುಂದಕ್ಕೆ ಕೃಷಿ ಭೂಮಿ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆಯನ್ನು ಏಳು ದಿನಗಳ ಒಳಗೆ ಮಾಡಿಕೊಡಲಾಗುವದೆಂದು ಸರಕಾರ ಹೇಳುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಇದಕ್ಕೆ ಅವಕಾಶ ಮಾಡಿಕೊಡಬಾರದೆಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನ ಸರಕಾರವನ್ನು ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಕರ್ನಲ್ ಸಿ.ಪಿ. ಮುತ್ತಣ್ಣ, ಕೊಡಗು ಕಾವೇರಿ ಜಲಾನಯನ ಪ್ರದೇಶವಾಗಿದ್ದು, ಕಾವೇರಿ ನದಿಗೆ ಶೇ. ೩೩ ರಷ್ಟು ನೀರು ಕೊಡಗಿನ ತೋಟ, ಗದ್ದೆಗಳಿಂದ ಹರಿದು ಹೋಗುತ್ತದೆ. ಮಂಡ್ಯ, ಮೈಸೂರು, ಬೆಂಗಳೂರು, ತಮಿಳುನಾಡು ಸೇರಿದಂತೆ ಸುಮಾರು ಎಂಟು ಕೋಟಿ ಮಂದಿಗೆ, ದೊಡ್ಡ, ದೊಡ್ಡ ಕೈಗಾರಿಕೆಗಳಿಗೆ ಇದೇ ನೀರು ಪೂರೈಕೆಯಾಗುತ್ತಿದ್ದು, ಕೊಡಗಿನಲ್ಲಿ ಭೂ ಪರಿವರ್ತನೆಯಾದರೆ ಇದೆಲ್ಲದಕ್ಕೂ ಧಕ್ಕೆಯಾಗಲಿದೆ ಎಂದು ಹೇಳಿದರು. ಕರ್ನಾಟಕ ಭೂಕಂದಾಯ ಕಾಯ್ದೆ ೧೯೬೪ ಪ್ರಕಾರ ಕೃಷಿ ಭೂಮಿ, ಕಾಫಿ ತೋಟ, ಬಾಣೆ ಜಾಗಗಳ ಭೂ ಪರಿವರ್ತನೆಗೆ ಅವಕಾಶವಿಲ್ಲ. ಇದಕ್ಕೆ ನಿರಾಪೇಕ್ಷಣಾ ಪತ್ರ ಕೂಡ ನೀಡಲಾಗುವದಿಲ್ಲ, ನೀಡಿದಲ್ಲೂ ಅದು ಅನಧಿಕೃತವಾಗಲಿದೆ.
(ಮೊದಲ ಪುಟದಿಂದ) ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯ ಕೂಡ ಭೂಪರಿವರ್ತನೆಗೆ ಆದೇಶ ನೀಡುವ ಹಕ್ಕು ಜಿಲ್ಲಾಡಳಿತಕ್ಕೆ ಇಲ್ಲವೆಂದು ಹೇಳಿದೆ. ಹಾಗಾಗಿ ಭೂಪರಿವರ್ತಿತ ನಿವೇಶನಗಳೆಂದು ಮಾರಾಟ ಮಾಡುತ್ತಿರುವದೆಲ್ಲವೂ ಅನಧಿಕೃತವಾಗಲಿವೆ ಎಂದು ಮುತ್ತಣ್ಣ ಹೇಳಿದರು.
೨೦೧೮ರಲ್ಲಿ ಭೂಕುಸಿತ ಉಂಟಾದ ಸಂದರ್ಭ ಕೊಡಗು ಜಿಲ್ಲೆಯಲ್ಲಿ ಇನ್ನು ಮುಂದಕ್ಕೆ ಭೂ ಪರಿವರ್ತನೆಗೆ ಅವಕಾಶವಿಲ್ಲವೆಂಬ ಆದೇಶ ಹೊರಡಿಸಿದ್ದರು. ನಂತರದಲ್ಲಿ ಪರಿವರ್ತನೆಗೆ ಸಂಬAಧಿಸಿದAತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿ, ಜಾಗ ಪರಿಶೀಲನೆ ಮಾಡಿ ನಂತರ ಅವಕಾಶ ನೀಡುವಂತೆ ಅದೇಶ ಹೊರಡಿಸಲಾಯಿತು. ಆದರೆ, ಇದೀಗ ಕಂದಾಯ ಸಚಿವ ಆರ್. ಅಶೋಕ್ ಅವರು ಒಂದು ವಾರದೊಳಗಡೆ ಭೂಪರಿವರ್ತನೆ ಮಾಡಿಕೊಡಲಾಗುವದೆಂದು ಹೇಳಿದ್ದಾರೆ. ಕೊಡಗು ಜಿಲ್ಲೆಯನ್ನು ಇದರಿಂದ ಕೈಬಿಡಬೇಕೆಂದು ರಾಜ್ಯದ ಮುಖ್ಯಮಂತ್ರಿ, ಸರಕಾರದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಗಮನ ಸೆಳೆದಿರುವದಾಗಿ ಮುತ್ತಣ್ಣ ತಿಳಿಸಿದರು. ಈಗಾಗಲೇ ವೀರಾಜಪೇಟೆಯಿಂದ ಗೋಣಿಕೊಪ್ಪ, ಪೊನ್ನಂಪೇಟೆವರೆಗೆ ಪಟ್ಟಣ ನಿರ್ಮಾಣವಾಗುತ್ತಿದೆ. ಇತ್ತ ಮಡಿಕೇರಿಯಿಂದ ಸುಂಟಿಕೊಪ್ಪ, ಕುಶಾಲನಗರದವರೆಗೆ ಪಟ್ಟಣ ವ್ಯಾಪಿಸಿಕೊಳ್ಳುತ್ತಿದೆ. ಹಾಗಾಗಿ ನೀರಿನ ಬಳಕೆ ಹೆಚ್ಚಾಗಲಿದೆ. ಇನ್ನು ಹೊರಜಿಲ್ಲೆಗಳಿಗೆ ನೀರು ಎಲ್ಲಿಂದ ಕೊಡುವದು ಎಂದು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.
ಖಾಲಿ ಮಾಡಬೇಕಾದ ಪರಿಸ್ಥಿತಿ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಒಂದು ವರ್ಷದಲ್ಲಿ ಜಿಲ್ಲೆಗೆ ೩೮ಲಕ್ಷ ಮಂದಿ ಪ್ರವಾಸಿಗರು ಬಂದು ಹೋಗಿದ್ದಾರೆ. ಅವರುಗಳ ಭಾರ ೧.೯ಲಕ್ಷ ಟನ್ ಆಗಲಿದೆ. ೪೦ಸಾವಿರ ವಾಹನಗಳು ಬಂದಿದ್ದು, ೬೦ ಸಾವಿರ ಟನ್ ಭಾರ ಬೀಳುತ್ತದೆ. ಒಟ್ಟಾರೆ ಎಲ್ಲವೂ ಸೇರಿದಂತೆ ಸುಮಾರು ೨.೫ಲಕ್ಷ ಟನ್ ಭಾರ ಭೂಮಿ ಮೇಲೆ ಬೀಳುತ್ತದೆ. ಬೆಟ್ಟ ಪ್ರದೇಶಗಳು ಹೆಚ್ಚಿನ ಭಾರ ತಡೆದುಕೊಳ್ಳುವದಿಲ್ಲ, ಉತ್ತರಾಖಾಂಡದ ಜೋಶಿಮಠದಲ್ಲಿ ಭಾರ, ಒತ್ತಡ ತಾಳಲಾರದೆ ಭೂಮಿ ಬಿರುಕು ಬಿಡುತ್ತಿದ್ದು, ಅಲ್ಲಿನ ಜನ ಊರು ಖಾಲಿ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿಯೂ ೨೦೧೮ರಲ್ಲಿ ಭೂಮಿ ಬಿರುಕು ಬಿಟ್ಟು ಎಚ್ಚರಿಕೆಯನ್ನು ನೀಡಿದೆ. ಇದೇ ರೀತಿ ಮುಂದುವರಿದರೆ ಕೊಡಗಿನ ಜನತೆ ಕೂಡ ಜಾಗ ಖಾಲಿ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದ್ದು, ಕೊಡಗನ್ನು ಸಂರಕ್ಷಣೆ ಮಾಡಬೇಕಿದೆ ಎಂದು ಹೇಳಿದರು.
ಜನರಿಗೆ ಸಹಾಯವಾಗಲಿ
ಜಿಲ್ಲೆಯಲ್ಲಿ ಬಹುತೇಕರು ಕಷ್ಟ ಕಾಲದಲ್ಲಿ ತಮಗೆ ಸೇರಿದ ಜಾಗ, ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಾರೆ. ಇದು ನಿಲ್ಲಬೇಕು. ಸರಕಾರದ ‘ಪೇಮೆಂಟ್ ಎಕಲಾಜಿಕಲ್ ಸರ್ವೀಸ್’ ಯೋಜನೆಯಡಿ ಸಕ್ಕರೆ ಕಾರ್ಖಾನೆಗಳು, ದೊಡ್ಡ ದೊಡ್ಡ ಕಂಪೆನಿಗಳು ನಿಧಿಯನ್ನು ಸ್ಥಾಪಿಸಿ ಸರಕಾರಕ್ಕೆ ನೀಡುವ ಯೋಜನೆಯಿದೆ. ಈ ನಿಧಿಯ ಹಣದ ಪಾಲು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಗೆ ಬರಲಿದ್ದು, ಆ ಹಣದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸ್ಪಂದಿಸಬೇಕಿದೆ. ವಿದೇಶದಲ್ಲಿ ಇದು ಜಾರಿಯಲ್ಲಿದ್ದು, ಭಾರತದಲ್ಲಿ ಮೇಘಾಲಯ ಮುಂತಾದೆಡೆ ಜಾರಿಯಲ್ಲಿದೆ. ಇದನ್ನು ಎಲ್ಲ ರಾಜ್ಯಗಳಿಗೆ ವಿಸ್ತರಣೆ ಮಾಡಿದರೆ ಕಷ್ಟದಲ್ಲಿರುವ ಜನರಿಗೆ ಸಹಾಯವಾಗಲಿದೆ ಎಂದು ಮುತ್ತಣ್ಣ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಪ್ರತಿಷ್ಠಾನದ ರಾಯ್ ಬೊಪಣ್ಣ, ಶಾನ್ ಬೋಪಯ್ಯ ಇದ್ದರು.