ರಾಹುಲ್ ಗಾಂಧಿ ಭದ್ರತೆ ಹೆಚ್ಚಳ
ನವದೆಹಲಿ, ಜ. ೯: ಕಾಂಗ್ರೆನ್‌ನ ಭಾರತ್ ಜೋಡೋ ಯಾತ್ರೆ ಈ ತಿಂಗಳು ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲಿದ್ದು, ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಭದ್ರತೆಯನ್ನು ಬಿಗಿಗೊಳಿಸಲು ಭದ್ರತಾ ಸಂಸ್ಥೆಗಳು ಸಿದ್ಧತೆ ನಡೆಸಿವೆ. ಮೂಲಗಳ ಪ್ರಕಾರ, ಎರಡೂ ಪ್ರದೇಶಗಳು ಸೂಕ್ಷ್ಮವಾಗಿರುವುದರಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದೆ. ಭದ್ರತಾ ಸಂಸ್ಥೆಗಳು ಹೆಚ್ಚಿನ ಪಡೆಗಳನ್ನು ನಿಯೋಜಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ರಾಹುಲ್ ಗಾಂಧಿ ಯಾತ್ರೆ ಸಾಗುವ ಮಾರ್ಗದ ಬಗ್ಗೆ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದಿವೆ. ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿಗೆ ನಡೆದ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಭದ್ರತಾ ಸಂಸ್ಥೆಗಳು ಭಾರತ್ ಜೋಡೋ ಯಾತ್ರೆಯ ಮಾರ್ಗದ ಎಲ್ಲಾ ಸ್ಥಳಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿವೆ.
‘ಸಿದ್ದು ನಿಜ ಕನಸುಗಳು': ಪುಸ್ತಕ ಬಿಡುಗಡೆಗೆ ತಡೆ
ಬೆಂಗಳೂರು, ಜ. ೯: ‘ಸಿದ್ದು ನಿಜ ಕನಸುಗಳು" ಪುಸ್ತಕ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆ ನೀಡಿದೆ. "ಸಿದ್ದು ನಿಜ ಕನಸುಗಳು ಪುಸ್ತಕವನ್ನು ಇಂದು ನಗರದ ಟೌನ್ ಹಾಲ್‌ನಲ್ಲಿ ಬಿಡುಗಡೆ ಮಾಡಲು ಬಿಜೆಪಿ ಸಿದ್ಧತೆ ನಡೆಸಿತ್ತು. ಆದರೆ, ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಸಂಬAಧ ಡಾ. ಯತೀಂದ್ರ ಸಿದ್ದರಾಮಯ್ಯ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನಗರದ ೬೦ನೇ ಸಿಸಿಹೆಚ್ ನ್ಯಾಯಾಲಯ ಪುಸ್ತಕ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಪ್ರತಿವಾದಿಗಳಾಗಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಿದೆ. ಕೆಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅರ್ಜಿದಾರರ ಪರ ವಾದ ಮಂಡಿಸಿದರು. ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ, ಚುನಾವಣೆ ಹತ್ತಿರವಿರುವಂತೆಯೇ ಬಿಜೆಪಿ ಇಂತಹ ಕುತಂತ್ರ ಮಾಡಲು ಮುಂದಾಗಿದೆ. ನಾನು ಹಿಂದೂ ಆದರೆ ಹಿಂದುತ್ವ ವಿರೋಧಿ. ಪುಸ್ತಕದ ಮೂಲಕ ತಮ್ಮ ತೇಜೋವಧೆಗೆ ಮುಂದಾಗಿರುವುದಾಗಿ ಆರೋಪಿಸಿದರು.
ಹೆಂಡತಿಗೆ ಗುಂಡಿಕ್ಕಿ ತಾನೂ ಶೂಟ್ ಮಾಡಿಕೊಂಡ ಲೆಫ್ಟಿನೆಂಟ್ ಕರ್ನಲ್
ಚಂಡೀಗಢ, ಜ. ೯: ವೈವಾಹಿಕ ಕಲಹದಿಂದ ಬೇಸತ್ತು ಸೇನೆಯ ಲೆಫ್ಟಿನೆಂಟ್ ಕರ್ನಲ್ ಒಬ್ಬರು ಭಾನುವಾರ ರಾತ್ರಿ ತಮ್ಮ ಪತ್ನಿಯನ್ನು ಗುಂಡಿಕ್ಕಿ ಕೊಂದು, ಬಳಿಕ ತಾವೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಫಿರೋಜ್‌ಪುರ ಕಂಟೋನ್ಮೆAಟ್‌ನಲ್ಲಿ ನಡೆದಿದೆ. ಮೃತ ಅಧಿಕಾರಿಯನ್ನು ಲೆಫ್ಟಿನೆಂಟ್ ಕರ್ನಲ್ ನಿಶಾಂತ್ ಪರ್ಮಾರ್ ಮತ್ತು ಅವರ ಪತ್ನಿ ಡಿಂಪಲ್ ಎಂದು ಗುರುತಿಸಲಾಗಿದೆ. ದಂಪತಿಗೆ ಒಬ್ಬನೇ ಒಬ್ಬ ಮಗನಿದ್ದು, ಮಗನೂ ಅವರೊಂದಿಗೆ ವಾಸಿಸುತ್ತಿರಲಿಲ್ಲ. ಡಿಂಪಲ್ ಅವರು ನಿಶಾಂತ್ ಗೆ ಎರಡನೇ ಪತ್ನಿ ಎಂದು ತಿಳಿದು ಬಂದಿದೆ. ಲೆಫ್ಟಿನೆಂಟ್ ಕರ್ನಲ್ ನಿಶಾಂತ್ ಅವರು ಫಿರೋಜ್‌ಪುರ ಕಂಟೋನ್ಮೆAಟ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಭಾನುವಾರ ರಾತ್ರಿ ೪೨ ವರ್ಷದ ಪತ್ನಿ ಡಿಂಪಲ್(ಗೃಹಿಣಿ) ಅವರ ತಲೆಗೆ ಗುಂಡು ಹಾರಿಸಿ ನಂತರ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ನಂತರ ಅಧಿಕಾರಿಯು ತನ್ನ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಕುರಿತು ಸೇನಾ ಅಧಿಕಾರಿಗಳು ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ.