ಸೋಮವಾರಪೇಟೆ, ಜ. ೭: ತಾಲೂಕಿನಾದ್ಯಂತ ಪ್ರಗತಿಯಲ್ಲಿರುವ ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಸಂಬAಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಅಪ್ಪಚ್ಚು ರಂಜನ್ ಅವರು, ಬಡ ಮಂದಿಗೆ ನಿವೇಶನದ ಹಕ್ಕುಪತ್ರ ವಿತರಣೆ ಸಂಬAಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸಲು ಕ್ರಮವಹಿಸಬೇಕೆಂದು ಪಿಡಿಓಗಳಿಗೆ ನಿರ್ದೇಶನ ನೀಡಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ರಂಜನ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಕಾರ್ಯಕ್ರಮಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಗ್ರಾ.ಪಂ. ಅಧ್ಯಕ್ಷರುಗಳು, ಅಭಿವೃದ್ಧಿ ಅಧಿಕಾರಿಗಳು ಭಾಗಿಯಾಗಿದ್ದರು.
ತಾಲೂಕಿನಾದ್ಯಂತ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮುಖ್ಯರಸ್ತೆಗಳು ಹಾಗೂ ಗ್ರಾಮೀಣ ಭಾಗದ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀಘ್ರವಾಗಿ ಪೂರ್ಣಗೊಳಿಸಬೇಕು. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಎನ್ಡಿಆರ್ಎಫ್ನಡಿ ತಲಾ ೧ ಕೋಟಿ ಅನುದಾನ ನೀಡಲಾಗುವುದು. ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಪ್ರತಿದಿನ ವರದಿ ಸಲ್ಲಿಸಬೇಕೆಂದು ಅಭಿಯಂತರರುಗಳಾದ ಟಿ.ಪಿ. ವೀರೇಂದ್ರ ಹಾಗೂ ವೆಂಕಟೇಶ್ ನಾಯಕ್ ಅವರುಗಳಿಗೆ ಸೂಚಿಸಿದರು.
೧೫ ಕೋಟಿ ಅನುದಾನದ ನಿರೀಕ್ಷೆ: ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿಗೆ ಸಂಬAಧಿಸಿದAತೆ ಶೀಘ್ರದಲ್ಲೇ ೧೫ ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖಾ ಸಚಿವರು ಭರವಸೆ ನೀಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಅನುದಾನವನ್ನು ಆದಷ್ಟು ಬೇಗ ಬಳಕೆ ಮಾಡಬೇಕು. ಚುನಾವಣೆ ಎದುರಾದರೆ ನೀತಿ ಸಂಹಿತೆ ಜಾರಿಯಾಗಲಿದ್ದು, ನೂತನ ಕೆಲಸಗಳು ಸ್ಥಗಿತವಾಗಲಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜಾಗ್ರತೆ ವಹಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ರಂಜನ್ ನಿರ್ದೇಶನ ನೀಡಿದರು.
೨೪೭ ಗ್ರಾಮಕ್ಕೆ ನೀರು: ಜಲಜೀವನ್ ಮಿಷನ್ ಯೋಜನೆಯಡಿ ತಾಲೂಕಿನಲ್ಲಿ ೧೦೧ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ೨೪೭ ಗ್ರಾಮಗಳಿಗೆ ಈಗಾಗಲೇ ಕುಡಿಯುವ ನೀರಿನ ಸಂಪರ್ಕವನ್ನು ಪೂರ್ಣಗೊಳಿಸಲಾಗಿದೆ. ೫೧,೫೧೪ ಮನೆಗಳಿಗೆ ಸಂಪರ್ಕ ನೀಡಿದ್ದು, ೩೫,೦೦೦ ಮನೆಗಳಿಗೆ ನೀರು ಸರಬರಾಜು ಆಗುತ್ತಿದೆ. ಮಾರ್ಚ್ ಅಂತ್ಯದೊಳಗೆ ಯೋಜನೆಯ ಗುರಿ ಸಾಧನೆ ಮಾಡಲಾಗುವುದು ಎಂದು ಅಭಿಯಂತರ ವೀರೇಂದ್ರ ಹೇಳಿದರು.
ಅರಣ್ಯ ಹಕ್ಕು ಸಮಿತಿ ರಚಿಸಿ: ಆರ್ಟಿಸಿಯಲ್ಲಿ ಅರಣ್ಯ ಪ್ರದೇಶ, ಊರುಡುವೆ ಎಂದು ನಮೂದಾಗಿರುವ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಿರುವ ಮಂದಿಗೆ ಸರ್ಕಾರ ಹಕ್ಕುಪತ್ರ ನೀಡಲು ಕ್ರಮ ವಹಿಸಿದೆ. ಅಂತಹ ಗ್ರಾಮಗಳಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸಿ ತಕ್ಷಣ ಪಟ್ಟಿಯನ್ನು ಕಳುಹಿಸಿಕೊಡಬೇಕು. ಅಧಿಕಾರಿ ಗಳೊಂದಿಗೆ ತಾನೇ ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.
ಈ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಮುಂದಿನ ೧೦ ದಿನಗಳ ಒಳಗೆ ಪ್ರಥಮ ಆದ್ಯತೆಯೊಂದಿಗೆ ಕೆಲಸ ಮಾಡಬೇಕು. ಬಡ ಮಂದಿ ಸರ್ಕಾರದ ಸೌಲಭ್ಯದಿಂದ ವಂಚಿತರಾಗದAತೆ ನೋಡಿಕೊಳ್ಳಬೇಕು ಎಂದು ನಿರ್ದೇಶನವಿತ್ತರು.
ಗ್ರಾ.ಪಂ.ಗಳಲ್ಲಿ ಪಿಡಿಓ ಸಮಸ್ಯೆ: ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಖಾಯಂ ಪಿಡಿಓ, ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಇಲ್ಲದೇ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಎರಡರಿಂದ ಮೂರು ಗ್ರಾ.ಪಂ.ಗಳಿಗೆ ಓರ್ವ ಪಿಡಿಓ ನೇಮಕವಾಗಿದೆ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕೆಂದು ಕಿರಗಂದೂರಿನ ರಘು, ಗರ್ವಾಲೆಯ ನಂಜುAಡ, ಚೌಡ್ಲು ಗ್ರಾ.ಪಂ.ನ ಮಹೇಶ್ ಸೇರಿದಂತೆ ಇತರರು ಶಾಸಕರಲ್ಲಿ ಮನವಿ ಮಾಡಿದರು.
ದುಬಾರೆಗೆ ತೂಗು ಸೇತುವೆ: ಪ್ರಸಿದ್ಧ ಪ್ರವಾಸಿ ತಾಣವಾಗಿರುವ ದುಬಾರೆಯಲ್ಲಿ ತೂಗು ಸೇತುವೆಯ ಅವಶ್ಯಕತೆಯಿದೆ. ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು, ನದಿಯಲ್ಲಿ ನೀರಿನ ಹರಿವು ಹೆಚ್ಚಾಗುವ ಸಂದರ್ಭ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆ ಪ್ರವಾಸೋದ್ಯಮ ಇಲಾಖೆಯಿಂದ ತೂಗು ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಗ್ರಾ.ಪಂ. ಅಧ್ಯಕ್ಷ ಸಿ.ಎಲ್. ವಿಶ್ವ ಮನವಿ ಮಾಡಿದರು.
ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ೫.೨೦ ಕೋಟಿ ವೆಚ್ಚದ ಕ್ರಿಯಾಯೋಜನೆ ತಯಾರಿಸಿದೆ ಎಂದು ಅರಣ್ಯ ಇಲಾಖೆಯ ಎಸಿಎಫ್ ಶ್ರೀನಿವಾಸ್ ನಾಯಕ್ ಸಭೆಗೆ ತಿಳಿಸಿದರು. ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ರೈಲ್ವೆ ಬ್ಯಾರಿಕೇಡ್, ಸೋಲಾರ್ ಫೆನ್ಸಿಂಗ್ ಯೋಜನೆ ಅವೈಜ್ಞಾನಿಕವಾಗಿದೆ. ಬ್ಯಾರಿಕೇಡ್ಗಳನ್ನು ದಾಟಿಕೊಂಡೇ ಕಾಡಾನೆಗಳು ಬರುತ್ತಿವೆ ಎಂದು ವಿಶ್ವ ದೂರಿದರು.
ಬ್ಯಾರಿಕೇಡ್ಗಳನ್ನು ಅಳವಡಿಸುವ ಸಂದರ್ಭ ವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಬೇಕು. ಹಳೆಯ ಕಂದಕಗಳನ್ನು ಮುಚ್ಚಬಾರದು ಎಂದು ಶಾಸಕರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಹಾನಿ ಪರಿಹಾರ ಬಂದಿಲ್ಲ: ಮಳೆಗಾಲ ಸಂದರ್ಭ ಮನೆಗಳನ್ನು ಕಳೆದುಕೊಂಡ ಅನೇಕರಿಗೆ ಇನ್ನೂ ಪರಿಹಾರ ಬಂದಿಲ್ಲ. ಇದರೊಂದಿಗೆ ನೂತನ ಮನೆಗಳೂ ಮಂಜೂರಾಗಿಲ್ಲ ಎಂದು ಹಲವಷ್ಟು ಗ್ರಾ.ಪಂ. ಅಧ್ಯಕ್ಷರುಗಳು ದೂರಿದರು. ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಲೂಕು ತಹಶೀಲ್ದಾರ್ಗೆ ಶಾಸಕರು ಸೂಚಿಸಿದರು.
ಉಳಿದಂತೆ ವಿದ್ಯುತ್ ಇಲಾಖೆಯವರು ಬೇಕಾಬಿಟ್ಟಿ ಬಿಲ್ಗಳನ್ನು ನೀಡುತ್ತಿದ್ದಾರೆ. ಕೆಟ್ಟುನಿಂತಿರುವ ಕಂಬಗಳನ್ನು ತೆರವುಗೊಳಿಸುತ್ತಿಲ್ಲ. ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ೭೫ ಯೂನಿಟ್ ಉಚಿತ ವಿದ್ಯುತ್ ನೀಡಬೇಕಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಸಭೆಯಲ್ಲಿ ಕೇಳಿಬಂದವು. ಮಳೆಯಿಂದ ಹಾನಿಗೀಡಾದ ಕೃಷಿ ಫಸಲು ನಷ್ಟಕ್ಕೆ ಪರಿಹಾರ ಬಂದಿಲ್ಲ ಎಂದು ಶಾಸಕರ ಗಮನ ಸೆಳೆದರು.
ಮಾದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಇಲ್ಲ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ತಾ.ಪಂ., ಜಿ.ಪಂ. ಸೇರಿದಂತೆ ಇತರ ಇಲಾಖೆಗಳ ಮೂಲಕ ಕಾಮಗಾರಿ ಕೈಗೊಳ್ಳುವ ಸಂದರ್ಭ ಸ್ಥಳೀಯ ಗ್ರಾ.ಪಂ.ಗಳಿಗೆ ಮಾಹಿತಿ ನೀಡುತ್ತಿಲ್ಲ ಎಂದು ಅಧ್ಯಕ್ಷರುಗಳು ಆರೋಪಿಸಿದರು. ಮುಂದಿನ ದಿನಗಳಲ್ಲಿ ಗ್ರಾ.ಪಂ.ಗಳಿಗೆ ಮಾಹಿತಿ ನೀಡುವಂತೆ ಶಾಸಕರು ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್, ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ, ಆಡಳಿತಾಧಿಕಾರಿ ರಾಜಗೋಪಾಲ್, ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭಾಗಿಯಾಗಿದ್ದರು.