ಸೋಮವಾರಪೇಟೆ, ಜ. ೮: ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಗುAದ ಗ್ರಾಮದ ಕುರುಡುವಳ್ಳಿಯಲ್ಲಿ ಕಳೆದ ಕೆಲ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಸಮಸ್ಯೆ ಪರಿಹರಿಸಲು ಗ್ರಾ.ಪಂ. ಮುಂದಾಗ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುಮಾರು ೭೫ ಕುಟುಂಬಗಳು ಕುರುಡುವಳ್ಳಿಯಲ್ಲಿ ವಾಸಿಸುತ್ತಿದ್ದು, ಕಳೆದ ಐದಾರು ತಿಂಗಳಿನಿAದ ಕುಡಿಯವ ನೀರಿನ ಸಮಸೆ ಉಂಟಾಗಿದೆ. ಪೈಪ್‌ಲೈನ್‌ನಿಂದ ಮಣ್ಣು ಹಾಗೂ ಮರಳು ಮಿಶ್ರಿತ ನೀರು ಹರಿದುಬರುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಸಂಪೂರ್ಣ ನೀರು ಕಲುಷಿತಗೊಂಡಿದೆ. ಇದರೊಂದಿಗೆ ಗ್ರಾಮಕ್ಕೆ ನೀರೊದಗಿಸುವ ಪಂಪ್‌ಹೌಸ್‌ನಲ್ಲಿದ್ದ ವಿದ್ಯುತ್ ಫ್ಯೂಸ್‌ನ್ನು ಕಿತ್ತು ಹಾಕಲಾಗಿದೆ ಎಂದು ಗ್ರಾಮಸ್ಥರಾದ ಕೃಷ್ಣಕುಮಾರ್, ಗೋಪಿ, ಜಗದೀಶ್ ಕಾಂತರಾಜ್, ರಂಗಸ್ವಾಮಿ, ವೇಲಾಯುಧ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.

ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದ ಮೇರೆ, ಕ್ರಮ ವಹಿಸಿದ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ ಬೋರ್‌ವೆಲ್ ಕೆಟ್ಟಿರುವುದು ತಿಳಿದುಬಂದಿದೆ.

ಇದರಿಂದಾಗಿ ಪಕ್ಕದ ಗ್ರಾಮದಿಂದ ನೀರನ್ನು ಹರಿಸಲು ಕ್ರಮವಹಿಸಲಾಗಿದ್ದು, ಇದಕ್ಕೂ ಕೆಲ ಕಿಡಿಗೇಡಿಗಳು ತಡೆಯೊಡ್ಡುತ್ತಿದ್ದಾರೆ. ಕುರುಡುವಳ್ಳಿ ಗ್ರಾಮಕ್ಕೆ ನೀರು ಹರಿಸುವ ಬೋರ್‌ವೆಲ್‌ನ ಫ್ಯೂಸ್‌ನ್ನು ಕಿಡಿಗೇಡಿಗಳು ಕಿತ್ತು ಹಾಕಿ ವಿಕೃತಿ ಮೆರೆದಿದ್ದಾರೆ.

ಇದರಿಂದಾಗಿ ಗ್ರಾಮಸ್ಥರಿಗೆ ಕುಡಿಯುವ ನೀರಿಲ್ಲದೇ ಪರಿ ತಪಿಸುತ್ತಿದ್ದು, ಪಕ್ಕದ ಎಸ್ಟೇಟ್‌ನಿಂದ ಟ್ಯಾಂಕರ್ ಮೂಲಕ ನೀರು ತಂದು ಬಳಸುವಂತಾಗಿದೆ. ಗ್ರಾಮದಲ್ಲಿ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿದ್ದು, ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಕುಡಿಯಲು ಮತ್ತು ಗೃಹಬಳಕೆಗೆ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಂಬAಧಿಸಿದ ಗ್ರಾ.ಪಂ. ಮುಂದಾಗಬೇಕು. ತಪ್ಪಿದ್ದಲ್ಲಿ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಎಚ್ಚರಿಸಿದ್ದಾರೆ.