ಮಡಿಕೇರಿ, ಜ. ೬ : ರಾಜ್ಯದಲ್ಲಿ ವಸತಿ ಶಾಲೆಗಳ ಶಿಕ್ಷಣದ ಗುಣಮಟ್ಟ ಮತ್ತು ಫಲಿತಾಂಶ ಉತ್ತಮವಾಗಿದ್ದು, ಬೇಡಿಕೆಯೂ ಸಹ ಹೆಚ್ಚಿದೆ. ಈ ಹಿನ್ನೆಲೆ ಮುಂದಿನ ಶೈಕ್ಷಣಿಕ ವರ್ಷದಿಂದ ೬ನೇ ತರಗತಿಗೆ ೫೦ ರಿಂದ ೧೦೦ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಓಬವ್ವ ಆತ್ಮ ರಕ್ಷಣೆ ಕಲೆ’ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಂಬೇಡ್ಕರ್, ಮೊರಾರ್ಜಿ ದೇಸಾಯಿ, ಏಕಲವ್ಯ, ಕಿತ್ತೂರು ರಾಣಿ ಚೆನ್ನಮ್ಮ, ನಾರಾಯಣ ಗುರು ಹೀಗೆ ಒಟ್ಟು ೮೩೦ ವಸತಿ ಶಾಲೆಗಳಿದ್ದು, ೨ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶ ಉತ್ತಮವಾಗಿದ್ದು, ರಾಜ್ಯದಾದ್ಯಂತ ಬೇಡಿಕೆ ಹೆಚ್ಚಿದೆ. ಆದ್ದರಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ೬ ನೇ ತರಗತಿ ಪ್ರವೇಶಕ್ಕೆ ‘ಎ’ ಮತ್ತು ‘ಬಿ’ ವಿಭಾಗ ಮಾಡಿ ೫೦ ರಿಂದ ೧೦೦ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಮಾಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲೆಮಾರಿಗಳ ಹೀಗೆ ಎಲ್ಲಾ ಬಡ ಗ್ರಾಮೀಣ ವಿದ್ಯಾರ್ಥಿಗಳು
(ಮೊದಲ ಪುಟದಿಂದ) ವಸತಿ ಶಾಲೆಗೆ ಸೇರಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದು, ಯಾರೂ ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ವಸತಿ ಶಾಲೆಗಳನ್ನು ಆರಂಭಿಸಿದೆ. ಆ ನಿಟ್ಟಿನಲ್ಲಿ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದು ಸಚಿವರು ನುಡಿದರು.
ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ಓದಿದ ೧೪ ವಿದ್ಯಾರ್ಥಿಗಳು ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ)ಗೆ ಆಯ್ಕೆಯಾಗಿದ್ದಾರೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.
ಶೇ.೨೫ ರಷ್ಟಾದರೂ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಜನೆಗೆ ಅವಕಾಶ ಮಾಡಬೇಕು ಎಂಬುದು ಸರ್ಕಾರದ ಆಶಯವಾಗಿದ್ದು, ಆ ನಿಟ್ಟಿನಲ್ಲಿ ವಸತಿ ಹಾಗೂ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಿದವರಿಗೆ ಸಾಧ್ಯವಾದಷ್ಟು ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅವಕಾಶ ಮಾಡಲಾಗುವುದು ಎಂದು ಸಚಿವರು ಹೇಳಿದರು.
ವಸತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಶಿಕ್ಷಕರಿಗೆ ಸೇವಾ ಭದ್ರತೆ ನೀಡಲಾಗುವುದು. ಶಿಕ್ಷಕರಿಗೆ ಗೌರವಧನ ಹೆಚ್ಚಿಸಲಾಗುವುದು. ಆ ನಿಟ್ಟಿನಲ್ಲಿ ರೂ. ೧೮ ಕೋಟಿ ವೆಚ್ಚವಾಗಲಿದೆ. ವಿದ್ಯಾರ್ಥಿಗಳಿಗೆ ಸಮವಸ್ತç ನೀಡಲು ಮುಂದಾಗಲಾಗಿದೆ ಎಂದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನೇಕ ಸವಾಲುಗಳಿದ್ದು, ಅದನ್ನು ಎದುರಿಸುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಇಡಲಾಗಿದೆ. ರಾಜ್ಯದಲ್ಲಿ ವಿದ್ಯಾರ್ಥಿ ನಿಲಯ ಪರಿಕಲ್ಪನೆಯನ್ನು ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದರು ಎಂದು ಸ್ಮರಿಸಿದರು. ‘ರಾಜ್ಯದಲ್ಲಿ ಇನ್ನೂ ೧.೨೦ ಲಕ್ಷ ಮಕ್ಕಳು ವಿದ್ಯಾರ್ಥಿ ನಿಲಯದಿಂದ ಹೊರಗಿದ್ದಾರೆ. ಎಲ್ಲರಿಗೂ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.’
ವಿದ್ಯಾರ್ಥಿ ನಿಲಯಗಳ ಮೂಲ ಸೌಕರ್ಯಕ್ಕೆ ರೂ. ೧೩೫ ಕೋಟಿ ಬೇಕಿದ್ದು, ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ. ಸರ್ಕಾರ ಎಲ್ಲಾ ರೀತಿಯ ಆರ್ಥಿಕ ನೆರವು ನೀಡಲಿದೆ. ೫೦ ಕಡೆಗಳಲ್ಲಿ ಕನಕದಾಸರ ಹೆಸರಿನಲ್ಲಿ ವಿದ್ಯಾರ್ಥಿ ನಿಲಯ, ಹಾಗೆಯೇ ೫ ಕಡೆಗಳಲ್ಲಿ(ಮಂಗಳೂರು, ಬೆಳಗಾವಿ, ಗುಲ್ಬರ್ಗಾ, ಮೈಸೂರು, ಬೆಂಗಳೂರು) ದೀನ್ ದಯಾಳ್ ಉಪಾಧ್ಯಾಯ ವಿದ್ಯಾರ್ಥಿ ನಿಲಯದಲ್ಲಿ ಒಂದು ಸಾವಿರ ಮಕ್ಕಳಿಗೆ ಅವಕಾಶ ಕಲ್ಪಿಸಲಾಗುವುದು. ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅವಕಾಶ ಬೇಕು ಎನ್ನುವ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರವೇಶಕ್ಕೆ ಅವಕಾಶ ಒದಗಿಸಲಾಗುವುದು ಎಂದರು.
‘ಬಡವರ ಮಕ್ಕಳು ಮೇಲೆ ಬರುವಂತಾಗಲು ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ರಾಷ್ಟçದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತಾಬೇಕು ಎಂದು ಹೇಳಿದರು.’
ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ ‘ಓಬವ್ವ ಆತ್ಮ ರಕ್ಷಣೆ ಕಲೆ’ ಕಲಿಯುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಮಾಜದಲ್ಲಿ ಧೈರ್ಯವಾಗಿ ಬದುಕಲು ಸಾಧ್ಯ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಮಾತನಾಡಿ ವಿದ್ಯಾರ್ಥಿನಿಯರು ಕರಾಟೆ ಕಲಿಯುವುದರಿಂದ ಆತ್ಮರಕ್ಷಣೆಯಿಂದ ಓಡಾಡಲು ಸಹಕಾರಿಯಾಗಲಿದೆ ಎಂದರು. ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್ ಅವರು ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಎನ್. ಮಂಜುನಾಥ್, ವಸತಿ ಶಾಲೆಗಳ ಜಿಲ್ಲಾ ಸಮನ್ವಯಾಧಿಕಾರಿ ಲೋಕೇಶ್, ವಿವಿಧ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ, ಪ್ರಕಾಶ್, ಶ್ರೀದೇವಿ, ಭಾರತಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ, ವಿಸ್ತರಣಾಧಿಕಾರಿ ಚಂದ್ರಪ್ಪ, ಇಂಜಿನಿಯರ್ ಚೆನ್ನೇಸ್, ಇತರರು ಇದ್ದರು. ವಿದ್ಯಾರ್ಥಿನಿಯರು ‘ಓಬವ್ವ ಆತ್ಮ ರಕ್ಷಣೆ ಕಲೆ’ ಪ್ರದರ್ಶನ ಮಾಡಿದರು.
ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ದೌರ್ಜನ್ಯ ತಡೆಯುವ ಹಿನ್ನೆಲೆ ಸರ್ಕಾರವು ಹೆಣ್ಣು ಮಕ್ಕಳ ಸುರಕ್ಷತೆಗೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ.
ಪ್ರತಿಕೂಲ ಸನ್ನಿವೇಶಗಳಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವಷ್ಟು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢ ಹಾಗೂ ಸಮರ್ಥರಾಗಿರುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ಈ ರೀತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢ ಮತ್ತು ಸಮರ್ಥರಾಗಲು ಇವರಿಗೆ ಆತ್ಮ ರಕ್ಷಣಾ ಕಲೆಗಳಾದ ಕರಾಟೆ, ಜೂಡೋ, ಟೆಕ್ವಾಂಡೋಗಳಲ್ಲಿ ಪರಿಣತಿ ಹೊಂದುವುದು ಅವಶ್ಯಕವಾಗಿದೆ.
ಈ ಕಲೆಗಳಲ್ಲಿ ಅವರು ಪರಿಣತಿ ಪಡೆದರೆ ಯಾವುದೇ ಪ್ರತಿಕೂಲ ಸನ್ನಿವೇಶಗಳಲ್ಲಿ ಧೈರ್ಯದಿಂದ ತಮ್ಮöನ್ನು ತಾವು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ.
ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧೀನದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿನಿಯರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಹಾಗೂ ಸ್ವಯಂ ರಕ್ಷಣೆಗಾಗಿ ಕರಾಟೆ, ಜೂಡೋ, ಟೆಕ್ವಾಂಡೋ ತರಬೇತಿಯನ್ನು ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ವೀರ ವನಿತೆ ‘ಒನಕೆ ಓಬವ್ವ’ ಇವರ ಹೆಸರಿನಲ್ಲಿ ‘ಓಬವ್ವ ಆತ್ಮ ರಕ್ಷಣಾ ಕಲೆ’ ತರಬೇತಿ ನೀಡಲಾಗುತ್ತಿದೆ.
ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ವಸತಿ ಶಾಲೆಗಳಲ್ಲಿನ ೨ ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸಲಾಗುತ್ತಿದೆ.
ತರಬೇತಿಯನ್ನು ಪ್ರತಿ ವಾರದ ೨ ದಿನಗಳಲ್ಲಿ ಪ್ರತಿ ಅವಧಿಗೆ ಕನಿಷ್ಟ ೪೫ ರಿಂದ ೫೦ ನಿಮಿಷಗಳ ಸಮಯ ನಿಗದಿಪಡಿಸಿ, ಒಟ್ಟು ೬ ತಿಂಗಳಿಗೆ ೪೮ ಬೋಧನಾ ಅವಧಿಗಳಿಗೆ ಮಾನ್ಯತೆ ಹೊಂದಿದ ಸಂಸ್ಥೆಯ ನಿಗದಿತ ಮತ್ತು ಅರ್ಹ ಬ್ಲಾಕ್ ಬೆಲ್ಟ್ ಹೊಂದಿದ ಮಹಿಳಾ ತರಬೇತುದಾರರ ಮೂಲ ಸ್ವಯಂ ರಕ್ಷಣಾ ಕೌಶಲ್ಯಗಳ ಕರಾಟೆ ತರಬೇತಿ ನೀಡಲಾಗುತ್ತಿದೆ.
೨೦೨೧-೨೨ ನೇ ಸಾಲಿನಲ್ಲಿ ನೀಡಿದ ಕರಾಟೆ ತರಬೇತಿಯಲ್ಲಿ ವಿದ್ಯಾರ್ಥಿನಿಯರು ಅತ್ಯುತ್ಸಾಹದಿಂದ ಭಾಗವಹಿಸಿ ಉತ್ತಮ ಸ್ಪಂದನೆ ಕಂಡುಬAದಿದ್ದರಿAದ ೨೦೨೨-೨೩ ನೇ ಸಾಲಿನಲ್ಲಿಯೂ ಇತರೆ ಶಾಲೆಗಳ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ೨೦೨೨-೨೩ ನೇ ಸಾಲಿನಲ್ಲಿ ೭೯೨ ವಸತಿ ಶಾಲೆಗಳ ೭, ೮ ಮತ್ತು ೯ ನೇ ತರಗತಿಯ ೭೫,೪೮೦ ವಿದ್ಯಾರ್ಥಿನಿಯರಿಗೆ ರೂ.೯೩೦.೫೫ ಲಕ್ಷ ವೆಚ್ಚದಲ್ಲಿ ಕರಾಟೆ ತರಬೇತಿ ನೀಡಲಾಗುತ್ತಿದೆ.
೨೦೨೨-೨೩ ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ೯೨೦ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿನ ೮೫,೭೧೩ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತಿದೆ. ೨೦೨೨-೨೩ ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ೩೦೩ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿನ ೧೭,೫೬೪ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಹಿತಿ ನೀಡಿದರು.