ಮಡಿಕೇರಿ, ಜ. ೬: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಅಂದಾಜು ಶೇ. ೬೫ರಿಂದ ೭೦ ರಷ್ಟು ಭತ್ತದ ಕಟಾವು ಪೂರ್ಣಗೊಂಡಿದೆ. ಇನ್ನೂ ಕೆಲಸ ಕಾರ್ಯಗಳು ಪ್ರಗತಿಯಲ್ಲಿದ್ದು, ಇದೀಗ ತ್ವರಿತಗತಿಯೊಂದಿಗೆ ಮುಕ್ತಾಯದ ಹಂತದಲ್ಲಿದೆ.

ಪ್ರಸಕ್ತ ಸಾಲಿನಲ್ಲಿ (೨೦೨೨-೨೩) ಕೃಷಿ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು ೩೦,೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯ ಗುರಿ ಹೊಂದಲಾಗಿತ್ತು. ಇದರಲ್ಲಿ ೨೩,೧೮೦ ಹೆಕ್ಟೇರ್‌ನಲ್ಲಿ ಕೃಷಿ ಮಾಡಲಾಗಿದ್ದು, ಶೇ. ೭೬ರಷ್ಟು ಸಾಧನೆಯಾಗಿತ್ತು. ರೈತರು ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿಯ ವಿವಿಧ ತಳಿಗಳನ್ನು ಕೃಷಿ ಮಾಡಿದ್ದರು. ಕಳೆದ ಹಲವು ಸಮಯದಿಂದ ಭತ್ತದ ಕಟಾವಿನ ಕೆಲಸ ನಡೆಯುತ್ತಿದ್ದು, ಇದರಲ್ಲಿ ಅಂದಾಜು ಶೇ.೬೫ರಿಂದ ೭೦ರಷ್ಟು ಕೆಲಸ ಪೂರ್ಣಗೊಂಡಿರುವುದಾಗಿ ಇಲಾಖೆ ಸಂಗ್ರಹಿಸಿರುವ ಪ್ರಾಥಮಿಕ ಹಂತದ ಸಮೀಕ್ಷೆಯಲ್ಲಿ ವರದಿಯಾಗಿರುವುದಾಗಿ ಇಲಾಖೆಯ ಜಂಟಿ ನಿರ್ದೇಶಕಿ ಶಬನಾ ಎಂ. ಶೇಕ್ ಅವರು ತಿಳಿಸಿದ್ದಾರೆ.

ಅಕಾಲಿಕ ಮಳೆಯಿಂದ ನಷ್ಟ

ಪ್ರಸ್ತುತ ವರ್ಷ ನವೆಂಬರ್ ಅಂತ್ಯ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ವಾತಾವರಣದಲ್ಲಿನ ಏರು-ಪೇರಿನಿಂದಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ಭತ್ತದ ಫಸಲಿಗೆ ಧಕ್ಕೆಯುಂಟಾಗಿದೆ. ಇಲಾಖೆಗೆ ವರದಿಯಾಗಿರುವಂತೆ ಜಿಲ್ಲೆಯಲ್ಲಿ ಸುಮಾರು ೨೯೭ ಹೆಕ್ಟೇರ್ ಪ್ರದೇಶದಲ್ಲಿ ಫಸಲಿಗೆ ಹಾನಿಯುಂಟಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ೨೦೪ ಹೆಕ್ಟೇರ್, ವೀರಾಜಪೇಟೆ ೮ ಹೆಕ್ಟೇರ್, ಕುಶಾಲನಗರ ೧೭ ಹೆಕ್ಟೇರ್ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೬೭ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಹಾನಿಯುಂಟಾಗಿರುವ ಮಾಹಿತಿಯಿದೆ. ಈ ಕುರಿತ ವರದಿಯನ್ನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.