ವೀರಾಜಪೇಟೆ, ಜ. ೭: ಶಾಲೆಯಲ್ಲಿ ಅಕ್ಷರ ದಾಸೋಹದ ಸಿಬ್ಬಂದಿಯೋರ್ವರಿಗೆ ಅಡುಗೆಯ ಸಂದರ್ಭದಲ್ಲಿ ಕುದಿಯುವ ಬಿಸಿ ನೀರು ಕಾಲಿಗೆ ತಾಗಿ ನಡೆಯಲಾರದ ಸ್ಥಿತಿಗೆ ತಲುಪಿದ್ದಾರೆ. ಇಲಾಖೆಯು ಯಾವುದೇ ರೀತಿಯ ಸಹಾಯಹಸ್ತ ನೀಡಿರುವುದಿಲ್ಲ ಎಂದು ಅಸಹಾಯಕ ಪರಿಸ್ಥಿತಿಯಲ್ಲಿರುವ ಮಹಿಳೆ ಆರೋಪಿಸಿದ್ದಾರೆ.
ಮಡಿಕೇರಿ ತಾಲೂಕು ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾರಾಣೆ ಗ್ರಾಮದ ನಿವಾಸಿ ಎ.ಕೆ. ಸೋಮಯ್ಯ ಅವರ ಪತ್ನಿ ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಸೇವೆಯಲ್ಲಿರುವ ಎ.ಎಸ್. ಶಾಂತಿ (೫೮) ಬಿಸಿ ನೀರಿನಿಂದ ಗಾಯಳಾಗಿ ನೋವು ಸಹಿಸಿಕೊಂಡಿರುವ ಮಹಿಳೆ.
ಸುಮಾರು ಎರಡು ವರ್ಷಗಳಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪಾರಾಣೆಯಲ್ಲಿ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಅಡುಗೆ ಸಹಾಯಕಿಯಾಗಿ ದುಡಿಯುತಿದ್ದು, ದಿನಾಂಕ ೨.೧.೨೦೨೩ರ ಸೋಮವಾರ ಶಾಲೆಯಲ್ಲಿ ಸುಮಾರು ೧೦ ಗಂಟೆಗೆ ಶಾಲೆಯ ಶಿಕ್ಷಕರು ಬಿಸಿ ನೀರು ತರುವಂತೆ ತಿಳಿಸಿದರು. ಶಿಕ್ಷಕರ ಆದೇಶದ ಮೇರೆಗೆ ಅಡುಗೆ ಮನೆಯಲ್ಲಿ ಬಿಸಿ ನೀರು ತಯಾರು ಮಾಡುತಿದ್ದ ಶಾಂತಿ ನೀರಿನ ಪಾತ್ರೆಯನ್ನು ಇಳಿಸುವ ವೇಳೆಯಲ್ಲಿ ಆಕಸ್ಮಿಕವಾಗಿ ಕುದಿಯುವ ಬಿಸಿ ನೀರು ಎಡಕಾಲಿನ ಮೇಲೆ ಬಿದ್ದು ಸಂಪೂರ್ಣ ಸುಟ್ಟುಹೋಯಿತು. ಶಾಲೆಯ ಸನಿಹದಲ್ಲಿರುವ ಪ್ರಮಿಳ ಎಂಬವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದು, ಪ್ರಮಿಳ ಅವರು ಸ್ಥಳಕ್ಕೆ ಆಗಮಿಸಿ ಪ್ರಥಮ ಚಿಕಿತ್ಸೆ ನೀಡಿದರು. ನಂತರದಲ್ಲಿ ನಾಪೋಕ್ಲು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯಲ್ಲಿ ಪತಿಯು ಅನಾರೋಗ್ಯದಿಂದ ಬಳಲುತ್ತಿದ್ದು, ಜೀವನ ಸಾಗಿಸಲು ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ದೊರಕುವ ಸಂಬಳವೇ ಮೂಲಾಧಾರವಾಗಿದೆ. ಮಗ ಕೊಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದಾನೆ. ಕೆಲಸ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಶಾಂತಿ ಅವರು ಇದ್ದು, ಇಲಾಖೆಯ ವತಿಯಿಂದ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ.
ಗಾಯಳು ಬಡತನದಲ್ಲಿದ್ದು ಇಲಾಖೆಯ ವತಿಯಿಂದ ದೊರಕುವ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಸರ್ವ ಪ್ರಯತ್ನ ಮಾಡುತ್ತೇನೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಹೆಚ್.ಎನ್. ಶಾಂತಿ ಭರವಸೆ ನೀಡಿದರು.
-ಕಿಶೋರ್ ಕುಮಾರ್ ಶೆಟ್ಟಿ