ಕುಶಾಲನಗರ, ಜ. ೬: ‘ಶಾಲೆಯಿಲ್ಲ ವಿದ್ಯೆಯಿಲ್ಲ, ಈ ಬಾಲಕನಿಗೆ ಅಜ್ಜಿಯೆ ಎಲ್ಲ’ ಎಂಬ ‘ಶಕ್ತಿ’ಯ ಹಲವು ವರ್ಷಗಳ ಹಿಂದಿನ ವರದಿಯೊಂದು ಅನಾಥ ಬಾಲಕನಿಗೆ ಶಿಕ್ಷಣದ ಅವಕಾಶವನ್ನು ಕಲ್ಪಿಸುವುದರೊಂದಿಗೆ ಅಂಧಕಾರದಲ್ಲಿದ್ದ ಅಜ್ಜಿಗೆ ಬೆಳಕಾಗಿ ಎರಡು ಬಡಜೀವಗಳಿಗೆ ಆಸರೆಯಾಗಿರುವ ಘಟನೆ ‘ಶಕ್ತಿ’ಯ ಮಹಾನ್ ಸಾಧನೆ ಕಣ್ಣೆದುರು ಕಾಣುತ್ತಿರುವುದು ಹೆಮ್ಮೆಯ ಸಂಗತಿ.
೨೦೧೬, ಮಾರ್ಚ್ ೧೫.... ಅಜ್ಜಿಯ ಜೀವನಕ್ಕೆ ಊರುಗೋಲಾಗಿ ನಿಂತಿದ್ದ ಆಕೆಯ ಮೊಮ್ಮಗ ಇಬ್ಬರು ಸೇರಿ ಭಿಕ್ಷಾಟನೆಯಲ್ಲಿ ತೊಡಗಿದ್ದ ದೃಶ್ಯವೊಂದು ಸಮೀಪದ ಕೊಪ್ಪ ಗ್ರಾಮದಲ್ಲಿ ‘ಶಕ್ತಿ’ಗೆ ಕಂಡುಬAದಿತ್ತು. ತಂದೆ ತಾಯಿ ಇಲ್ಲದ ಅನಾಥ ಬಾಲಕ ತನ್ನ ಅಂಧ ಅಜ್ಜಿಗೆ ಅತ್ತಿಂದಿತ್ತ ತೆರಳಲು ದಾರಿ ತೋರಿಸುತ್ತಿದ್ದ ಮೊಮ್ಮಗ.... ಭಿಕ್ಷಾಟನೆಯಲ್ಲಿ ಸಂಗ್ರಹವಾಗುವ ಪುಡಿಗಾಸಿನ ಲೆಕ್ಕವನ್ನು ಕಣ್ಣು ಕಾಣದ ಅಜ್ಜಿಯ ಎದುರು ಮೊಮ್ಮಗನೇ ಮಾಡುತ್ತಿದ್ದ, ಮೊಮ್ಮಗ ಲೆಕ್ಕ ಮಾಡಿ ಅಜ್ಜಿಗೆ ಹೇಳಿದ್ದಷ್ಟೆ ಲೆಕ್ಕ ತನಗೆ ಬೇಕಾದ ತಿಂಡಿ ತಿನಿಸುಗಳನ್ನು ತಿನ್ನುವಷ್ಟಕ್ಕೆ ಕಾಸನ್ನು ತನ್ನ ಜೇಬಿನಲ್ಲಿಟ್ಟುಕೊಂಡು ಅಜ್ಜಿಗೆ ಲೆಕ್ಕ ಕೊಡುವುದು ಮೊಮ್ಮಗನ ದಿನಚರಿಯಾಗಿತ್ತು. ಈ ಎಲ್ಲಾ ಚಟುವಟಿಕೆಗಳನ್ನು ನಿತ್ಯ ‘ಶಕ್ತಿ’ ಗಮನಿಸಿ ನೊಂದ ಜೀವಗಳಿಗೆ ಆಸರೆ ಕಲ್ಪಿಸುವ ತವಕದಲ್ಲಿ ಮಾಹಿತಿ ಕಲೆಹಾಕುವ ಯತ್ನ ಕೆಲವು ದಿನಗಳ ಕಾಲ ನಡೆದಿತ್ತು.
ಸರ್ಕಾರಿ ಶಾಲೆ ಅಜ್ಜಿ - ಮೊಮ್ಮಗನ ಮನೆಯಿಂದ ಕೂಗಳತೆಯ ದೂರದಲ್ಲಿದ್ದರೂ, ಅಜ್ಜಿ ಮತ್ತು ಮೊಮ್ಮಗ ಮಾತ್ರ ಭಿಕ್ಷಾಟನೆಯಲ್ಲಿ ತೊಡಗುವ ಮೂಲಕ ಜೀವನ ದಿನನಿತ್ಯದ ಕಾಯಕವಾಗಿತ್ತು. ಅಜ್ಜಿ ಸತ್ತ ಮೇಲೆ ನಾನು ಶಾಲೆಗೆ ಹೋಗುತ್ತೇನೆ ಎನ್ನುವ ಪುಟ್ಟ ಬಾಲಕ ಮತ್ತು ಜೀವನದಲ್ಲಿ ಅಂಧಕಾರದಲ್ಲಿದ್ದ ಅಜ್ಜಿಯ ಬಗ್ಗೆ ‘ಶಕ್ತಿ’ಯಲ್ಲಿ ಮಾನವೀಯ ವರದಿಯೊಂದು ಪ್ರಕಟಗೊಂಡ ಬೆನ್ನಲ್ಲೇ ವರದಿಗೆ ಶೀಘ್ರವಾಗಿ ಸ್ಪಂದನಗಳು ಬರತೊಡಗಿದವು.
ನಿರಾಶ್ರಿತ ಅಜ್ಜಿ - ಮೊಮ್ಮಗನಿಗೆ ಮಡಿಕೇರಿಯ ವಿಕಾಸ ವಿಕಲಚೇತನ ಸಂಸ್ಥೆ ಅನಾಥ ಜೀವಗಳಿಗೆ ಬೆಳಕು ನೀಡಲು ಮುಂದೆ ಬಂದಿದ್ದು, ಅನಾಥರಿಗೆ ಆಸರೆ ಕಲ್ಪಿಸುವುದರ ಜೊತೆಗೆ ಕೊಡಗು ಚೈಲ್ಡ್ಲೈನ್ ಸಂಸ್ಥೆ, ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಕೂಡ ವರದಿಗೆ ತಕ್ಷಣ ಸ್ಪಂದಿಸಿ ಅನಾಥ ಜೀವಗಳಿಗೆ ಆಸರೆಯಾಗಲು ಮುಂದೆ ಬಂದಿದ್ದವು.
ಮಡಿಕೇರಿಯ ವಿಕಾಸ್ ವಿಕಲಚೇತನ ಸಂಸ್ಥೆಯ ಮುಖ್ಯಸ್ಥ ರಮೇಶ್ ಮತ್ತು ಸಂಗಡಿಗರ ಪ್ರಯತ್ನ ಫಲಿಸಿ, ಚೈಲ್ಡ್ಲೈನ್ ಕೊಡಗು ಸಂಸ್ಥೆಯ ಜಿಲ್ಲಾ ಸಂಯೋಜಕ ಸಿರಾಜ್ ಅಹಮ್ಮದ್, ಕಾರ್ಯಕರ್ತರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಮುಖರಾದ ಶಿವರಾಜ್ ಮತ್ತಿತರರು ಅನಾಥರ ನೆರೆ ಮನೆಯವರೊಂದಿಗೆ ಚರ್ಚಿಸಿ ಭಿಕ್ಷಾಟನೆಯಿಂದ ಮುಕ್ತಗೊಳಿಸಲು ಪ್ರಯತ್ನಿಸಿದ್ದ ಫಲ ಆ ಸಂದರ್ಭದಲ್ಲಿ ಬಹುತೇಕ ಯಶಸ್ಸು ಕೂಡ ಕಂಡಿತ್ತು.
‘ಶಕ್ತಿ’ ಪತ್ರಿಕೆಯಲ್ಲಿ ವರದಿ ಪ್ರಕಟಗೊಳ್ಳುತ್ತಿದ್ದಂತೆ ಸಮಸ್ಯೆಯ ಆಳ ಅರಿತ ಪತ್ರಿಕೆಯ ಆಗಿನÀ
ಸಂಪಾದಕರಾಗಿದ್ದ ಬಿ.ಜಿ ಅನಂತಶಯನ ಅವರು, ಪ್ರಕರಣಕ್ಕೆ ಪರಿಹಾರ ಒದಗಿಸುವ ಬಗ್ಗೆ ಅಂದಿನÀ ಜಿಲ್ಲಾಡಳಿತದೊಂದಿಗೆ ಸಂಪರ್ಕಿಸಿ ನಿರಾಶ್ರಿತ ಅಜ್ಜಿ ಮತ್ತು ಅನಾಥ ಮೊಮ್ಮಗನಿಗೆ ಬೆಳಕಾಗಲು ಭಗೀರಥ ಪ್ರಯತ್ನಪಟ್ಟಿದ್ದು ನಿಜವಾಗಿಯೂ ಇದೀಗ ಸಾರ್ಥಕವಾಗಿದೆ.
ಕೈ ಹಿಡಿದು ನಡೆಸುತ್ತಿದ್ದ ೭ ವರ್ಷದ ಮೊಮ್ಮಗನ ಕೈ ಸ್ಪರ್ಶ, ಭಿಕ್ಷಾ ಪಾತ್ರೆಗೆ ಬೀಳುತ್ತಿದ್ದ ಚಿಲ್ಲರೆ ಹಣದ ಶಬ್ದ, ಇವೆರೆಡೇ ಪ್ರಪಂಚವಾಗಿ ಅಂಧಕಾರದಲ್ಲಿದ್ದ ೭೫ ವರ್ಷದ ವಯೋವೃದ್ಧೆಯನ್ನು ವಿಶ್ವ ನೋಡುವಂತೆ ಮಾಡಿದ ಸಾಧನೆ ಮಡಿಕೇರಿಯ ನೇತ್ರತಜ್ಞ ಡಾ. ಪ್ರಶಾಂತ್ ಮತ್ತು ಅವರ ತಂಡದ್ದು, ಸ್ಪಂದನಾಶೀಲ ವ್ಯಕ್ತಿಗಳ ಸಹಕಾರದಿಂದ ಅಂಧತ್ವದಲ್ಲಿ ಮುಳುಗಿ ಮರೆಯಾಗುತ್ತಿದ್ದ ಅಜ್ಜಿ - ಮೊಮ್ಮಗನ ಬಾಳನ್ನು ಬೆಳಕಿಗೆ ತಂದ ‘ಶಕ್ತಿ’ ವರದಿಗೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಸ್ಪಂದನೆ ನೀಡುವುದರೊಂದಿಗೆ ಅನಾಥರ ಬದುಕಿಗೆ ಆಸರೆ ಆಗುವ ಮೂಲಕ ಇದೀಗ ಅಜ್ಜಿ ತನ್ನ ಗ್ರಾಮದಲ್ಲಿ ಸ್ವತಂತ್ರವಾಗಿ ಬದುಕು ಕಾಣುವಂತಾಗಿದೆ. ‘ಶಕ್ತಿ’ ಪ್ರತಿನಿಧಿಯೊಂದಿಗೆ ಆಗಾಗ್ಗೆ ತನ್ನ ಮೊಮ್ಮಗನ ಕ್ಷೇಮ ಸಮಾಚಾರ ವಿಚಾರಿಸುವುದು ಅಜ್ಜಿಯ ದಿನಚರಿಯಾಗಿದೆ. ಇತ್ತ ಅಜ್ಜಿಗೆ ಊರುಗೋಲಾಗಿದ್ದ ಮೊಮ್ಮಗ ಸರ್ಕಾರಿ ಶಾಲೆಯೊಂದರಲ್ಲಿ ೭ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಂತಾಗಲಿ ಎನ್ನುವುದು ‘ಶಕ್ತಿ’ಯ ಮತ್ತು ವಿಕಾಸ್ ವಿಕಲಚೇತನ ಸಂಸ್ಥೆಯ ಆಶಯವಾಗಿದೆ.
‘ಶಕ್ತಿ’ಯಲ್ಲಿ ಮಾನವೀಯ ವರದಿ ಪ್ರಕಟಗೊಂಡು ಈ ವರದಿಗೆ ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ೨೦೧೬ ರ ಅತ್ಯುತ್ತಮ ಪರಿಣಾಮಕಾರಿ ವರದಿ ವಾರ್ಷಿಕ ಪ್ರಶಸ್ತಿ ಕೂಡ ಲಭಿಸಿತ್ತು.
ಪ್ರತ್ಯಕ್ಷ ವರದಿ- ಚಂದ್ರಮೋಹನ್