ಸೋಮವಾರಪೇಟೆ, ಜ. ೫ : ಅಧ್ಯಾತ್ಮಿಕ ಸಾಧನೆಯಿಂದ ಪರಮಾತ್ಮನ ಅನುಭೂತಿ ಪಡೆಯಲು ಸಾಧ್ಯ. ಒಳಿತಿನ ಕಡೆಗೆ ನಮ್ಮೆಲ್ಲರ ಮನಸ್ಸು ಸಾಗಬೇಕು ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸ್ವಾಮಿ ಸೂರ್ಯಪಾದಜೀ (ಛಾಯಣ್ಣ) ಅವರು ಅಭಿಮತ ವ್ಯಕ್ತಪಡಿಸಿದರು.

ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಶ್ರೀ ರಾಮಮಂದಿರದಲ್ಲಿ ೬ನೇ ವರ್ಷದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನಂತರದ ಸತ್ಸಂಗದಲ್ಲಿ ಅವರು ಮಾತನಾಡಿದರು.

ದೇವಾಲಯಗಳು ಧ್ಯಾನ ಮತ್ತು ಜ್ಞಾನದ ಮಂದಿರಗಳಾಗಿವೆ. ಅಧ್ಯಾತ್ಮಿಕ ಸಾಧನೆಗೆ ಕಠಿಣ ತಪಸ್ಸು ಬೇಕು. ಮಾನಸಿಕ ವ್ಯಾಕುಲತೆಗಳಿಂದ ದೂರವಿದ್ದು, ಮನಸ್ಸನ್ನು ಸದಾ ಜಾಗೃತ ಮತ್ತು ಸಂತೋಷವಾಗಿಡಲು ಯೋಗ ಹಾಗೂ ಸತ್ಸಂಗಗಳು ಸಹಕಾರಿಯಾಗಿವೆ ಎಂದು ಛಾಯಣ್ಣ ಅವರು ತಿಳಿಸಿದರು.

ವೈಕುಂಠ ಏಕಾದಶಿ ಅಂಗವಾಗಿ ಬೆಳಿಗ್ಗೆ ೭ ರಿಂದ ೧೦ರವರೆಗೆ ಮತ್ತು ಸಂಜೆ ೫ ರಿಂದ ೮-೩೦ರ ವರೆಗೆ ಸ್ವರ್ಗದ ಬಾಗಿಲ ಪ್ರವೇಶ ಮತ್ತು ದೇವರ ದರ್ಶನ ನಡೆಯಿತು. ಸಂಜೆ ೫ಕ್ಕೆ ಸೀತಾ ಬಳಗದಿಂದ ವಿಷ್ಣು ಸಹಸ್ರನಾಮ, ಪಠಣ ನಡೆಯಿತು.

ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಸಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಸೀತಾ ಬಳಗದ ಅಧ್ಯಕ್ಷೆ ಲೀಲಾ ನಿರ್ವಾಣಿ, ಯುವಕ ಸಂಘದ ಅಧ್ಯಕ್ಷ ಬಿ.ಜಿ. ರವಿ, ಪ್ರಮುಖರಾದ ಸತಿನ್ ಸಿದ್ದಪ್ಪ, ಬಿ.ಎಂ. ಶ್ರೀಧರ್ ಮತ್ತಿತರರು ಇದ್ದರು.