ಸೋಮವಾರಪೇಟೆ, ಜ. ೪: ಮಾದಾಪುರ ಪಟ್ಟಣದಲ್ಲಿನ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಇಲಾಖೆಯಿಂದ ನಿಲುಗಡೆಗೊಳಿಸಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸುವಂತೆ ಅನೇಕ ಬಾರಿ ಇಲಾಖೆಗೆ ಮನವಿ ಮಾಡಿದ್ದರೂ ಈವರೆಗೆ ತೆರವಿಗೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಾದಾಪುರ ಪಟ್ಟಣದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಅಳವಡಿಸಿದ್ದ ವಿದ್ಯುತ್ ಕಂಬ ಶಿಥಿಲಾವಸ್ಥೆಗೆ ತಲುಪಿದ್ದು, ಕಳೆದೆರಡು ವರ್ಷಗಳ ಹಿಂದೆ ಇದರ ಪಕ್ಕದಲ್ಲಿ ನೂತನ ಕಂಬವನ್ನು ಅಳವಡಿಸಲಾಗಿದೆ. ಆದರೆ ಈವರೆಗೆ ನೂತನ ಕಂಬಕ್ಕೆ ತಂತಿಗಳನ್ನು ಎಳೆದಿಲ್ಲ. ಇದೀಗ ರಸ್ತೆಯು ಅಗಲೀಕರಣಗೊಂಡಿದ್ದು, ಡಾಂಬರು ರಸ್ತೆಯ ಮಧ್ಯೆ ಹಳೆಯ ಕಂಬ ನಿಂತಿದೆ.

ರಸ್ತೆಯ ಮಧ್ಯೆ ಕಂಬ ಇರುವುದರಿಂದ ವಾಹನಗಳ ಸಂಚಾರ ಮತ್ತು ನಿಲುಗಡೆಗೆ ಸಮಸ್ಯೆಯಾಗಿದೆ. ನೂತನ ಕಂಬಕ್ಕೆ ತಂತಿಗಳ ಸಂಪರ್ಕ ನೀಡಿ, ಹಳೆಯ ಕಂಬವನ್ನು ತೆರವುಗೊಳಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಏನಾದರೂ ಅನಾಹುತವಾದರೆ ವಿದ್ಯುತ್ ಇಲಾಖೆಯೇ ನೇರ ಹೊಣೆಯಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.