ಸೋಮವಾರಪೇಟೆ, ಜ. ೪: ನೀರು ಕುಡಿಯಲು ಕೆರೆಗೆ ಬಂದ ಹಸುವೊಂದು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಂದರ್ಭ ೯ನೇ ತರಗತಿಯ ಬಾಲಕ ಆಪದ್ಬಾಂಧವನಾಗಿ ರಕ್ಷಿಸಿದ ಘಟನೆ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಬ್ಬೆಟ್ಟ ಗ್ರಾಮದಲ್ಲಿ ನಡೆದಿದೆ.
ಕಿಬ್ಬೆಟ್ಟ ಗ್ರಾಮದ ಕೆರೆಗೆ ನೀರು ಕುಡಿಯಲು ಬಂದ ಹಸು, ಆಕಸ್ಮಿಕವಾಗಿ ಕೆರೆಯೊಳಗೆ ಬಿದ್ದಿದ್ದು, ಕೆರೆಯಲ್ಲಿ ತಾವರೆ ಬಳ್ಳಿಗಳು ಹೆಚ್ಚಿದ್ದರಿಂದ ಹೊರಬರಲಾಗದೇ ಪರಿತಪಿಸುತ್ತಿತ್ತು. ಇದೇ ಸಂದರ್ಭ ಶಾಲೆಗೆ ತೆರಳುತ್ತಿದ್ದ ಕಿಬ್ಬೆಟ್ಟ ಗ್ರಾಮದ ೯ನೇ ತರಗತಿ ವಿದ್ಯಾರ್ಥಿ ರೋಹನ್, ಹಸುವಿನ ದಯನೀಯ ಸ್ಥಿತಿಯನ್ನು ಕಂಡು ರಕ್ಷಿಸಲು ಮುಂದಾಗಿದ್ದಾನೆ.
ತಕ್ಷಣ ಪಕ್ಕದ ಮನೆಯಿಂದ ಕೊಕ್ಕೆ ತಂದು ಹಸುವಿನ ಮೂಗುದಾರಕ್ಕೆ ಸಿಕ್ಕಿಸಿ ಹೊರಗೆಳೆದಿದ್ದಾನೆ. ಕೆರೆಯಿಂದ ಹೊರ ಬಂದ ಹಸು ‘ಬದುಕಿದೆಯಾ ಬಡಜೀವವೇ’ ಎಂದು ತನ್ನ ಮಾಲೀಕರ ಮನೆ ಕಡೆ ತೆರಳಿದೆ. ಬಾಲಕ ರೋಹನ್‌ನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿರುವ ಗ್ರಾಮಸ್ಥರು, ಕೆರೆಯ ಸುತ್ತಲೂ ಸುರಕ್ಷತಾ ಬೇಲಿ ಇಲ್ಲದೇ ಇರುವುದರಿಂದ ಇಂತಹ ಅಪಾಯಗಳು ಸಂಭವಿಸುತ್ತಲೇ ಇವೆ. ಸಂಬAಧಿಸಿದ ಗ್ರಾ.ಪಂ. ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.