ಭಾಗಮಂಡಲ, ಜ. ೪: ಸಮೀಪದ ಸಣ್ಣಪುಲಿಕೋಟು ಗ್ರಾಮದ ರೈತರು ಕಾಡುಪ್ರಾಣಿಗಳ ಉಪಟಳದಿಂದ ಬೇಸತ್ತಿದ್ದಾರೆ. ಸಣ್ಣಪುಲಿಕೋಟು ಗ್ರಾಮದ ಕುಯ್ಯಮುಡಿ ಮನೋಜ್ ಅವರು ಭತ್ತದ ಬೆಳೆ ಬೆಳೆದಿದ್ದು ಇದೀಗ ಕಾಡು ಹಂದಿಗಳ ಉಪಟಳದಿಂದ ಬೆಳೆ ಸಂಪೂರ್ಣ ನಾಶವಾಗುತ್ತಿದೆ.

ಪ್ರತಿದಿನ ಕಾಡು ಹಂದಿಗಳು ಗದ್ದೆಗಳಿಗೆ ದಾಳಿ ಇಡುತ್ತಿದ್ದು ಭತ್ತದ ಬೆಳೆಯನ್ನು ಧ್ವಂಸಗೊಳಿಸುತ್ತಿವೆ. ಮಳೆಗಾಲದಲ್ಲಿ ಧಾರಾಕಾರ ಮಳೆಯಿಂದ ನಷ್ಟ ಸಂಭವಿಸಿತ್ತು. ಅಳಿದುಳಿದ ಭತ್ತದ ಪೈರು ಫಸಲು ಕೊಡುವ ಹಂತಕ್ಕೆ ತಲುಪಿದ್ದು, ಇದೀಗ ಫಸಲು ಕೈಗೆಟುಕುವ ವೇಳೆ ಕಾಡುಪ್ರಾಣಿಗಳ ಉಪಟಳದಿಂದ ನಷ್ಟವಾಗುತ್ತಿದೆ ಎಂದು ಮನೋಜ್ ಅಳಲು ತೋಡಿಕೊಂಡಿದ್ದಾರೆ.

ಭಾಗಮAಡಲ ವಲಯ ಅರಣ್ಯಾಧಿಕಾರಿ ಕೊಟ್ರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡುಪ್ರಾಣಿಗಳ ಉಪಟಳದಿಂದ ಅಪಾರ ನಷ್ಟವಾಗಿದ್ದು ಸರ್ಕಾರ ಬೆಳೆ ನಷ್ಟ ಪರಿಹಾರವನ್ನು ಒದಗಿಸಿ ಕೊಡುವಂತೆ ಮನೋಜ್ ಒತ್ತಾಯಿಸಿದ್ದಾರೆ. -ಸುನಿಲ್