ಗೋಣಿಕೊಪ್ಪ ವರದಿ, ಜ. ೪: ತಾ. ೨೨ ರಿಂದ ೨೫ ರವರೆಗೆ ನಡೆಯಲಿರುವ ಬೈತೂರು ಹಬ್ಬದ ಪ್ರಯುಕ್ತ ಭಕ್ತರಿಂದ ಅಕ್ಕಿ, ಎಣ್ಣೆ, ತೆಂಗಿನಕಾಯಿ ಸಂಗ್ರಹಿಸಲು ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಂಗ್ರಹ ಕೇಂದ್ರ ಸ್ಥಾಪಿಸಲಾಗಿದ್ದು, ಭಕ್ತರು ಕೇಂದ್ರಗಳಿಗೆ ತಲುಪಿಸಬೇಕಿದೆ ಎಂದು ತಕ್ಕರಾದ ಪುಗ್ಗೇರ ಪೊನ್ನಪ್ಪ ತಿಳಿಸಿದ್ದಾರೆ.
ಬೇಟೆ ಕುರುಮನಿಗೆ ಈ ಬಾರಿ ೧೨ ಸಾವಿರ ತೆಂಗಿನ ಕಾಯಿ ಅರ್ಪಿಸುವ ಮಹಾತ್ಕಾರ್ಯ ನಡೆಯಲಿದ್ದು, ತಾ. ೧೫ ರಿಂದ ೧೮ ರವರೆಗೆ ತೆಂಗಿನ ಕಾಯಿಗಳನ್ನು ಸಂಗ್ರಹ ಕೇಂದ್ರಕ್ಕೆ ನೀಡಬಹುದಾಗಿದೆ. ದಿನಾಂಕಕ್ಕೆ ಮುನ್ನ ನೀಡಿದರೆ ಕಾಯಿ ಕೊಳೆತು ಹೋಗುವ ಕಾರಣ ಭಕ್ತರು ಸಹಕರಿಸಬೇಕು. ತೆಂಗಿನ ಕಾಯಿ ನೀಡಲು ಆಗದವರು ಹಣದ ರೂಪದಲ್ಲಿ ಕೂಡ ಒಪ್ಪಿಸಬಹುದಾಗಿದೆ ಎಂದು ಮನವಿ ಮಾಡಿದ್ದಾರೆ.
ಅನ್ನಸಂತರ್ಪಣೆಗೆ ಜಿಲ್ಲೆಯ ಭಕ್ತರಿಗೆ ಬಿಳಿ ಅನ್ನ ನೀಡಬೇಕಾಗಿರುವುದರಿಂದ ಆಡಳಿತ ಮಂಡಳಿ ನಿರ್ಧಾರದಂತೆ ಚೂಡಿ ಬಿಟಿ ಅಕ್ಕಿ, ದೇವರ ಅಭಿಷೇಕಕ್ಕೆ ತುಪ್ಪ, ದೇವರ ಪೂಜೆಗೆ ಎಣ್ಣೆ, ಅನ್ನಸಂತರ್ಪಣೆಗೆ ತರಕಾರಿ, ಪಾಯಸಕ್ಕೆ ಬೆಲ್ಲ ನೀಡಬಹುದಾಗಿದೆ.
ಧನ ಸಹಾಯ ನೀಡುವವರು ನೇರವಾಗಿ ತಕ್ಕರನ್ನು ಸಂಪರ್ಕಿಸಿ ನೀಡಬಹುದಾಗಿದೆ. ವೀರಾಜಪೇಟೆ ಎಸ್ಬಿಐ ಖಾತೆ ಸಂಖ್ಯೆ ೩೫೨೨೯೫೩೪೭೦೬ (ಐಎಫ್ಸಿ-ಎಸ್ಬಿಐಎನ್ ೦೦೦೦೯೫೦) ಬೈತೂರು ಸಂಘ ಖಾತೆಗೆ ಜಮಾ ಮಾಡಬಹುದಾಗಿದ್ದು, ಮಾಹಿತಿಗೆ ೯೬೬೩೯೭೭೩೦೪, ೯೯೦೧೨೦೯೫೩೦ ಸಂಪರ್ಕಿಸಬಹುದಾಗಿದೆ.
ವೀರಾಜಪೇಟೆಯ ಗೋಣಿಕೊಪ್ಪ ರಸ್ತೆಯ ಅಮ್ಮಣಕುಟ್ಟಂಡ ಕಿರಣ್, ಮೂರ್ನಾಡಿನಲ್ಲಿ ಪುದಿಯೊಕ್ಕಡ ರಮೇಶ್, ಪೊನ್ನಂಪೇಟೆಯಲ್ಲಿ ಐನಂಡ ಬೋಪಣ್ಣ, ಗೋಣಿಕೊಪ್ಪದಲ್ಲಿ ಪಾಲಿಬೆಟ್ಟ ರಸ್ತೆ ಜಂಕ್ಷನ್ನಲ್ಲಿರುವ ಹಿಂದು ಮಲಯಾಳಿ ಸಮಾಜ, ಅಮ್ಮತ್ತಿಯಲ್ಲಿ ಕುಟ್ಟಂಡ ಬೋಜಿ ಬ್ರದರ್ಸ್ ಹೊಟೇಲ್, ಕುಟ್ಟದಲ್ಲಿ ಚೋಡುಮಾಡ ಶರೀನ್ ಸುಬ್ಬಯ್ಯ, ಶ್ರೀಮಂಗಲ ಮಂದಮಾಡ ತೇಜಪ್ಪ ಇಲ್ಲಿ ಕಾಣಿಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ.