ಕೂಡಿಗೆ, ಜ. ೪: ಚಿಕ್ಕತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಖಾಸಗಿ ಕಾಫಿ ಘಟಕದವರು ಆನೆಕೆರೆ ಜಾಗಕ್ಕೆ ಮಣ್ಣು ತುಂಬುತ್ತಿರುವ ಬಗ್ಗೆ ಗ್ರಾಮಸ್ಥರ ಆರೋಪದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಫಿ ಘಟಕಕ್ಕೆ ಸಂಬAಧಿಸಿದ ಜಾಗವಿದ್ದು ಕೆರೆಯಂಚಿಗೆ ಲೋಡ್ ಗಟ್ಟಲೆ ಮಣ್ಣು ತಂದು ತುಂಬಲಾಗುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಒತ್ತುವರಿ ಆರೋಪ ಮಾಡಿದ ಬೆನ್ನಲ್ಲೇ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಅಭಿವೃದ್ಧಿ ಅಧಿಕಾರಿ ಸಂತೋಷ್, ಸದಸ್ಯರಾದ ಫಿಲೋಮಿನ, ಚಂದ್ರು, ಗೌರಮ್ಮ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳಕ್ಕೆ ಆಗಮಿಸಿದ ಕಾಫಿ ಘಟಕದ ವ್ಯವಸ್ಥಾಪಕರಲ್ಲಿ ಸಮಜಾಯಿಷಿಕೆ ಬಯಸಿದರು. ಮಣ್ಣು ಸಾಗಿಸಲು ಗ್ರಾಮ ಪಂಚಾಯಿತಿಯಿAದ ಯಾವುದೇ ಅನುಮತಿ ಪಡೆದುಕೊಳ್ಳದ ಬಗ್ಗೆ ಆಕ್ಷೇಪಿಸಿದ ಜನಪ್ರತಿನಿಧಿಗಳು ಖಾಸಗಿ ಜಾಗ ಸುತ್ತಳತೆ ಪ್ರದೇಶ ಸರ್ವೆ ನಡೆಸಿದ ಬಳಿಕ ಕಾಮಗಾರಿ ಮುಂದುವರಿಸಲು ಸೂಚನೆ ನೀಡಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಮತ್ತು ಅಭಿವೃದ್ಧಿ ಅಧಿಕಾರಿ ಸಂತೋಷ್, ಕಾಫಿ ಘಟಕದವರು ತಮಗೆ ಸೇರಿದ ಜಾಗ ಸಮತಟ್ಟು ಮಾಡಲು ಮಣ್ಣು ಹಾಕುತ್ತಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಈಗಾಗಲೇ ತಹಶಿಲ್ದಾರರ ಗಮನಕ್ಕೆ ತರಲಾಗಿದ್ದು, ಅವರುಗಳ ಮೂಲಕ ಸರ್ವೆ ನಡೆಸಿ ಪರಿಶೀಲಿಸಲಾಗುವುದು ಎಂದರು. ಈ ಸಂದರ್ಭ ಕಾಫಿ ಘಟಕ ವ್ಯವಸ್ಥಾಪಕ ಕುಮಾರ್, ಗ್ರಾಮಸ್ಥರಾದ ವರದ, ಪ್ರವೀಣ್, ರವಿ, ಮುಕೇಶ್, ಕನಕ ಮತ್ತಿತರರು ಇದ್ದರು.