ಮಡಿಕೇರಿ, ಜ. ೩: ಸ್ವಚ್ಛತೆ ಕಾಪಾಡುವ ಜೊತೆಗೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಕೊಡಗಿನ ಪರಿಸರದ ಬಗ್ಗೆ ಹಾಗೂ ಸ್ವಚ್ಛತೆ ಕಾಪಾಡಲು ಮನವಿ ಮಾಡಬೇಕೆಂದು ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಮಲ್ಲಪ್ಪ ಹೇಳಿದರು.

ಕೆ. ನಿಡುಗಣೆ ಗ್ರಾ.ಪಂ. ಪ್ರಮುಖ ಪ್ರವಾಸಿ ತಾಣವಾದ ಅಬ್ಬಿಪಾಲ್ಸ್ನಲ್ಲಿ ವೇದಿಕೆ ವತಿಯಿಂದ ಕುವೆಂಪು ಜನ್ಮ ದಿನದ ಅಂಗವಾಗಿ ನಡೆದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪ್ರವಾಸಿಗರಿಗೆ ಸ್ವಚ್ಛತೆ ಬಗ್ಗೆ ಅರಿವು ಮುಡಿಸಬೇಕು ಮತ್ತು ರಸ್ತೆ ಬದಿಯಲ್ಲಿ ಸ್ವಚ್ಛತಾ ಅಭಿಯಾನದ ಫಲಕಗಳನ್ನು ಹಾಕುವ ಮೂಲಕ ಜಾಗೃತಿ ಮುಡಿಸಬೇಕು ಎಂದರು.

ವೇದಿಕೆಯ ಕಾರ್ಯದರ್ಶಿ ನವೀನ್ ಅಜ್ಜಳಿ ಮಾತನಾಡಿ, ನಾವು ನಮ್ಮ ಗ್ರಾಮವನ್ನು ಸ್ವಚ್ಛವಾಗಿಡಲು ಪಣತೋಡಬೇಕು. ಇದು ಇತರ ಪಂಚಾಯಿತಿಗಳಿಗೆ ಮಾದರಿ ಯಾಗಲಿದೆ ಎಂದು ತಿಳಿಸಿದರು. ವೇದಿಕೆಯ ಕೋಶಾಧಿಕಾರಿ ಸಂದೀಪ್ ಮಾತನಾಡಿದರು. ಮುಂದಿನ ದಿನಗಳಲ್ಲಿ ಇತರ ಪ್ರವಾಸಿ ತಾಣಗಳಲ್ಲಿ ಇಂತಹ ಅಭಿಯಾನ ನಡೆಸಿ ಅರಿವನ್ನು ಮೂಡಿಸಲಾಗವುದು ಹಾಗೂ ಇನ್ನಿತರ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಮಡಿಕೇರಿ ನಗರದಿಂದ ಅಬ್ಬಿಪಾಲ್ಸ್ಗೆ ತೆರಳುವ ರಸ್ತೆಯಿಂದ ಅಬ್ಬಿಪಾಲ್ಸ್ನ ಪಾರ್ಕಿಂಗ್ ಸ್ಥಳವನ್ನು ಕಸ ಹೆಕ್ಕುವ ಮೂಲಕ ಸ್ವಚ್ಛತೆ ಮಾಡಲಾಯಿತು. ಸುಮಾರು ೩೫ಕ್ಕೂ ಅಧಿಕ ಬ್ಯಾಗ್‌ಗಳೊಂದಿಗೆ ೨ ವಾಹನದಷ್ಟು ಕಸವನ್ನು ಹೆಕ್ಕಲಾಯಿತು.

ಈ ಸಂದರ್ಭ ವೇದಿಕೆಯ ಉಪಾಧ್ಯಕ್ಷ ಕಿರಣ್, ಪೃಥ್ವಿ ಗೌಡಳ್ಳಿ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.