ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ
ಬೆಂಗಳೂರು, ಜ. ೪: ಆ್ಯಪ್ ಆಧಾರಿತ ಪ್ರಯಾಣ ಸೇವೆ ಒದಗಿಸುತ್ತಿರುವ ಓಲಾ, ಉಬರ್ ಕಂಪೆನಿಗಳ ಆಟೋ ಸೇವೆಗೆ ಶೇ. ೫ರಷ್ಟು ಸೇವಾಶುಲ್ಕ ನಿಗದಿಪಡಿಸಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮೋಟರ್ ವಾಹನ ಅಗ್ರಿಗೇಟರ್ಸ್-೨೦೨೦ ಪ್ರಕಾರ ದರವನ್ನು ಶೇ. ೫೦ ರಿಂದ ಶೇ. ೧೫೦ ರಷ್ಟು ಏರಿಕೆ ಮಾಡಬಹುದು. ಕೇಂದ್ರ ಸಾರಿಗೆ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯನ್ನೇ ಬಂಡವಾಳ ವಾಗಿಟ್ಟುಕೊಂಡು ಓಲಾ, ಉಬರ್ ಕಂಪೆನಿಗಳು ಪ್ರಯಾಣಿಕರ ಸುಲಿಗೆಗೆ ನಿಂತಿದ್ದವು. ಆದರೆ, ಇದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿ ಶೇ. ೫ ರಷ್ಟು ಮಾತ್ರ ಸೇವಾಶುಲ್ಕ ನಿಗದಿಪಡಿಸಿತ್ತು. ಇದರ ವಿರುದ್ಧ ಓಲಾ, ಉಬರ್ ಕಂಪೆನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಇದೀಗ ಈ ಪ್ರಕರಣ ವಿಚಾರಣೆ ಸಂಬAಧ ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ರೈಲ್ವೇ ನಿಲ್ದಾಣ ಡ್ರಮ್ನಲ್ಲಿ ಯುವತಿ ಶವ ಪತ್ತೆ
ಬೆಂಗಳೂರು, ಜ. ೪: ಯಶವಂತಪುರ ರೈಲ್ವೇ ನಿಲ್ದಾಣದ ಪ್ಲಾಸ್ಟಿಕ್ ಡ್ರಮ್ನಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ರೈಲು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಯಶವಂತಪುರ ರೈಲ್ವೇ ನಿಲ್ದಾಣದ ರೈಲು ಹಳಿ ಬಳಿಯ ಪ್ಲಾಸ್ಟಿಕ್ ಡ್ರಮ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ತುಂಬಾ ದಿನಗಳ ಹಿಂದೆಯೇ ಇದನ್ನು ಇಲ್ಲಿಡಲಾಗಿದ್ದು, ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿ ಅದನ್ನು ತೆರವುಗೊಳಿಸುವ ವೇಳೆ ಡ್ರಮ್ನಲ್ಲಿ ಮಹಿಳೆ ಶವ ಇರುವುದು ಪತ್ತೆಯಾಗಿದೆ. ಬಾಕ್ಸ್ ಮೇಲೆ ಬಟ್ಟೆಗಳನ್ನು ಸುತ್ತಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಕೊಲೆ ಮಾಡಿ ಶವವನ್ನು ಬಾಕ್ಸ್ನಲ್ಲಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಡ್ರಮ್ ಪರಿಶೀಲನೆ ಮಾಡಿದಾಗ ಕೊಳೆತ ಸ್ಥಿತಿಯಲ್ಲಿರುವ ಯುವತಿ ದೇಹ ಪತ್ತೆಯಾಗಿದೆ. ಯಶವಂತಪುರ ರೈಲ್ವೇ ನಿಲ್ದಾಣದ ಗೂಡ್ಸ್ ಪ್ಲಾಟ್ ಫಾರ್ಮ್ನ ಬಾಕ್ಸ್ ಒಂದರಲ್ಲಿ ಶವ ಪತ್ತೆಯಾಗಿದ್ದು, ಅಂದಾಜು ೨೩ ವರ್ಷದ ಯುವತಿ ಎಂದು ಗುರುತಿಸಲಾಗಿದೆ.
ಪ್ರಧಾನಿ ಮೋದಿ ಕಾಮಧೇನುವಿನಂತೆ: ಸಿಎಂ ಬೊಮ್ಮಾಯಿ
ಬಳ್ಳಾರಿ, ಜ. ೪: ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಸಿಎಂ ಬಸವರಾಜ ಬೊಮ್ಮಾಯಿಯವರು ನಾಯಿಮರಿ ಥರ ಮುದುಡಿಕೊಂಡಿರುತ್ತಾರೆ, ಅವರನ್ನು ಕಂಡರೆ ಭಯಪಡುತ್ತಾರೆ, ರಾಜ್ಯಕ್ಕೆ ಬೇಕಾದ ಅನುದಾನ ಪಡೆದುಕೊಳ್ಳಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಂದಾಲ್ ಸಹಯೋಗದೊಂದಿಗೆ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ೪೦೦ ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಭೂಮಿಪೂಜೆ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸಿದ್ದರಾಮಯ್ಯನವರ ಮಾತುಗಳು ಅವರ ಅವಿವೇಕತನ, ಅವರ ಸಂಸ್ಕೃತಿ, ನಡವಳಿಕೆ, ವ್ಯಕ್ತಿತ್ವವನ್ನು ತೋರಿಸುತ್ತವೆ. ಪ್ರತಿಯಾಗಿ ನಾನು ಏನೂ ಹೇಳುವುದಿಲ್ಲ. ನಾಯಿ ಬಹಳ ನಿಯತ್ತಿನ ಪ್ರಾಣಿ, ಜನರಿಗೆ ಬಹಳ ನಿಯತ್ತಿನಿಂದ ಕೆಲಸ ಮಾಡುವ ವ್ಯಕ್ತಿ ನಾನು. ನಾಯಿಯಲ್ಲಿರುವ ನಿಯತ್ತನ್ನು ನನ್ನ ಜೀವನದಲ್ಲಿಯೂ ಅಳವಡಿಸಿಕೊಂಡು ಹೋಗುತ್ತೇನೆ. ಜನರಿಗೆ ಸುಳ್ಳು ಹೇಳುವುದು, ವಂಚನೆ ಮಾಡುವುದು, ಸುಳ್ಳು ಸೌಭಾಗ್ಯಗಳ ಭರವಸೆ ನೀಡುವುದು ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಮಾಡಿದ ಕೆಲಸಗಳು. ಬಿಜೆಪಿ ಜನರಿಗೆ ಏನು ಮಾಡಿದೆ ಎಂದು ರಾಜ್ಯದ ಜನತೆಗೆ ಗೊತ್ತಿದೆ, ಇದೆಲ್ಲದಕ್ಕೂ ರಾಜ್ಯದ ಜನತೆ ಉತ್ತರಿಸುತ್ತಾರೆ, ಪ್ರಧಾನಿ ಮೋದಿಯವರು ಕಾಮಧೇನುವಿನಂತೆ ಎಂದರು. ಸಿದ್ದರಾಮಯ್ಯ ಹೇಳಿಕೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಶ್ರೀರಾಮುಲು ತಿರುಗೇಟು ಕೊಟ್ಟಿದ್ದಾರೆ. ಸೋನಿಯಾ ಗಾಂಧಿ ಮನೆಯಲ್ಲಿ ಸಿದ್ದರಾಮಯ್ಯ ಇಲಿ, ಬೆಕ್ಕು, ಜಿರಳೆ ಆಗಿರುತ್ತಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು
ನವದೆಹಲಿ, ಜ. ೪: ಸಾಮಾನ್ಯ ತಪಾಸಣೆಗಾಗಿ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಬುಧವಾರ ಇಲ್ಲಿನ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಸೋನಿಯಾ ಗಾಂಧಿ ಅವರು ಉಸಿರಾಟದ ಸೋಂಕಿನಿAದ ಬಳಲುತ್ತಿದ್ದು, ಮಂಗಳವಾರದಿAದ ಅಸ್ವಸ್ಥರಾಗಿದ್ದಾರೆ. ಅದಕ್ಕಾಗಿಯೇ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಸಂಜೆ ಉತ್ತರ ಪ್ರದೇಶಕ್ಕೆ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆಯಲ್ಲಿ ಏಳು ಕಿಲೋಮೀಟರ್ ನಡೆದು ದೆಹಲಿಗೆ ಮರಳಿದರು.
ಆಭರಣ ತೆಗೆದುಕೊಳ್ಳಲು ಕಾನೂನಿನಲ್ಲಿ ಅನುಮತಿ ಇಲ್ಲ: ದೆಹಲಿ ಹೈಕೋರ್ಟ್
ನವದೆಹಲಿ, ಜ. ೪: ತನ್ನ ಪತ್ನಿಗೆ ಮಾಹಿತಿ ನೀಡದೆ ಮತ್ತು ಆಕೆಯ ಒಪ್ಪಿಗೆ ಅಥವಾ ಆಕೆಗೆ ಅರಿವಿಲ್ಲದೆ ಪತಿ ಆಭರಣ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಪತ್ನಿಯ ದೂರಿನ ಮೇರೆಗೆ ಪತಿಯ ಬಂಧನ ಪೂರ್ವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಮಿತ್ ಮಹಾಜನ್ ನಡೆಸಿದರು. ಮನೆಗೆ ಬೀಗ ಹಾಕಲಾಗಿದೆ ಮತ್ತು ತಾನು ಮನೆಯಲ್ಲಿ ಇಲ್ಲದಿರುವಾಗ ಆಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಪತ್ನಿ ಆರೋಪಿಸಿದ್ದಾರೆ. ಯಾವುದೇ ಕಳವು ನಡೆದಿಲ್ಲ. ವೈವಾಹಿಕ ಭಿನ್ನಾಭಿಪ್ರಾಯದಿಂದಾಗಿ ಪತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪತಿಯ ಪರ ವಕೀಲರು ವಾದಿಸಿದರು. ಆದರೆ, ಅರ್ಜಿದಾರರು ದೂರುದಾರರ ಪತಿಯಾಗಿದ್ದರೂ ಸಹ, ಆಕೆಗೆ ತಿಳಿಯದೆ ಪತಿ ಕೂಡ ಆಭರಣಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಈ ರೀತಿ ತೆಗೆದುಕೊಳ್ಳಲು ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲ. ಇಬ್ಬರ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೂ ಕೂಡ, ಕಾನೂನನ್ನು ಕೈಗೆತ್ತಿಕೊಳ್ಳಲು ಯಾವುದೇ ವ್ಯಕ್ತಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಹಿಜಾಬ್ ಇಲ್ಲದೆ ವಿದೇಶದಲ್ಲಿ ಸ್ಪರ್ಧಿಸಿದ ಚೆಸ್ ಆಟಗಾರ್ತಿಗೆ ಇರಾನ್ ಎಚ್ಚರಿಕೆ
ಟೆಹ್ರಾನ್, ಜ. ೪: ಹಿಜಾಬ್ ಇಲ್ಲದೆ ವಿದೇಶದಲ್ಲಿ ಚೆಸ್ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಇರಾನ್ ಆಟಗಾರ್ತಿಗೆ ದೇಶಕ್ಕೆ ಮರಳದಂತೆ ಎಚ್ಚರಿಕೆ ನೀಡಲಾಗಿದೆ. ಕಜಕಿಸ್ತಾನದ ಅಲ್ಮಾಟಿಯಲ್ಲಿ ಕಳೆದ ವಾರ ನಡೆದ ಎಫ್ಐಡಿಇ ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಹಿಜಾಬ್ ಇಲ್ಲದೆ ಸ್ಪರ್ಧಿಸಿದ ನಂತರ ಇರಾನ್ ಚೆಸ್ ಆಟಗಾರ್ತಿ ಸಾರಾ ಖಡೆಮ್ ಅವರಿಗೆ 'ಇರಾನ್ಗೆ ಹಿಂತಿರುಗಬೇಡ' ಎಂದು ಎಚ್ಚರಿಕೆ ನೀಡಲಾಗಿದೆ ಎಂದು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ. ಇರಾನ್ನ ಕಟ್ಟುನಿಟ್ಟಾದ ಡ್ರೆಸ್ ಕೋಡ್ಗಳ ಅಡಿಯಲ್ಲಿ ಹೆಡ್ ಸ್ಕಾರ್ಫ್ ಕಡ್ಡಾಯವಾಗಿರುವ ಹಿಜಾಬ್ ಇಲ್ಲದೆ ಸ್ಪರ್ಧಿಸಿದ ಹಿನ್ನಲೆಯಲ್ಲಿ ಇರಾನ್ಗೆ ಚೆಸ್ ಆಟಗಾರ್ತಿ ಸಾರಾ ಖಡೆಮ್ ಅವರಿಗೆ ಬೆದರಿಕೆ ಹಾಕಲಾಗಿದೆ. ಇದೀಗ ಇರಾನ್ ಮೂಲಭೂತವಾದಿಗಳ ಎಚ್ಚರಿಕೆಯಿಂದಾಗಿ ೨೫ ವರ್ಷದ ಚೆಸ್ ಆಟಗಾರ್ತಿ ಮಂಗಳವಾರ ಸ್ಪೇನ್ಗೆ ತೆರಳಿದ್ದಾರೆ. ಘಟನೆ ಬಳಿಕ ಆಟಗಾರ್ತಿಗೆ ಹಲವಾರು ದೂರವಾಣಿ ಕರೆಗಳು ಬಂದಿದ್ದು, ದೇಶಕ್ಕೆ ಹಿಂದುರುಗದAತೆ ಎಚ್ಚರಿಕೆ ನೀಡಿವೆ. ಅದರಲ್ಲಿ ಕೆಲವರು ಪಂದ್ಯಾವಳಿಯ ನಂತರ ಜೀವ ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲದೇ ಇರಾನ್ನಲ್ಲಿರುವ ಖಡೆಂ ಅವರ ಸಂಬAಧಿಕರು ಮತ್ತು ಪೋಷಕರಿಗೆ ಬೆದರಿಕೆಗಳು ಬಂದಿವೆ ಎನ್ನಲಾಗಿದೆ. ಆದಾಗ್ಯೂ, ಇರಾನ್ನ ವಿದೇಶಾಂಗ ಸಚಿವಾಲಯವು ಪ್ರಕರಣದ ಕುರಿತು ಈವರೆಗೂ ಪ್ರತಿಕ್ರಿಯೆ ನೀಡಿಲ್ಲ.