ಕುಶಾಲನಗರ, ಜ. ೨: ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಗೆಳೆಯರ ಬಳಗದ ವತಿಯಿಂದ ೨೮ನೇ ವರ್ಷದ ಪಂಪಾ ದೀಪೋತ್ಸವ ಸಮಾರಂಭ ನಡೆಯಿತು.
ದೇವಾಲಯದ ಆವರಣದಲ್ಲಿ ಆಕರ್ಷಕ ರಂಗೋಲಿ ಚಿತ್ತಾರಗಳನ್ನು ರಚಿಸಿ ದೀಪಗಳ ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಂದ ಪಂಪಾದೀಪ ಮಂಟಪಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ಪಂಪಾ ದೀಪ ಮಂಟಪ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ಸ್ಥಳೀಯ ಕಾವೇರಿ ನದಿಗೆ ಮಂಗಳವಾದ್ಯ ಮದ್ದು ಗುಂಡುಗಳು ಸಿಡಿಸುವುದರೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಕಾವೇರಿ ನದಿಯಲ್ಲಿ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಗೆ ತೀರ್ಥ ಸ್ನಾನ ನೆರವೇರಿಸಿದ ಬಳಿಕ ಮಂಟಪವನ್ನು ನದಿಯಲ್ಲಿ ತೇಲಿ ಬಿಡಲಾಯಿತು.
ಅರ್ಚಕರಾದ ಕೃಷ್ಣಮೂರ್ತಿ ಭಟ್, ಸೋಮಶೇಖರ್ ಭಟ್, ವಿಷ್ಣುಮೂರ್ತಿ ಭಟ್ ಪೂಜಾ ವಿಧಿ ನೆರವೇರಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯ ಸಮಿತಿ ಪ್ರಮುಖರು, ಗೆಳೆಯರ ಬಳಗದ ವಿ.ಎಸ್. ಆನಂದ್ ಕುಮಾರ್, ರವಿ, ರಾಕಿ, ಹೆಚ್.ಟಿ. ವಸಂತ, ಚಂದ್ರು, ರಾಜೇಶ್, ನರೇಂದ್ರ, ಜಯಪ್ರಕಾಶ್ ಚಂದನ್, ದಿಲೀಪ್ ಮತ್ತಿತರರು ಇದ್ದರು.