ಮಡಿಕೇರಿ, ಜ. ೨: ಮಾನವ ಕಲ್ಯಾಣ., ಶಾಂತಿ ಹಾಗೂ ಸೌಹಾರ್ದತೆಗಾಗಿ ಸ್ಥಾಪನೆಯಾಗಿರುವ ಅಹ್ಮದೀಯ ಮುಸ್ಲಿಂ ಸಂಘಟನೆಯ ಮಹಿಳಾ ಘಟಕ (ಲಜ್ನಾ ಇಮಾ ಇಲ್ಲಾಹ್) ಸಂಸ್ಥೆಗೀಗ ಶತಮಾನದ ಸಂಭ್ರಮ.
ಜಾಗತಿಕ ಸಂಘಟನೆಯಾಗಿರುವ ಅಹ್ಮದೀಯ ಮುಸ್ಲಿಂ ಜಮಾ ಅತ್ ಇಸ್ಲಾಂನ ಉಪ ಘಟಕಗಳಲ್ಲಿ ಲಜ್ನಾ ಇಮಾ ಇಲ್ಲಾಹ್ ಮಹಿಳಾ ಘಟಕ ಕೂಡ ಒಂದಾಗಿದೆ. ೧೫ ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗಾಗಿ ತಮ್ಮ ಸಮುದಾಯದ ಆಡಳಿತಾತ್ಮಕ ವ್ಯವಹಾರಗಳಲ್ಲಿ ಪಾಲ್ಗೊಳ್ಳಲು ಮತ್ತು ಸ್ವತಂತ್ರ ಸ್ಥಾನವನ್ನು ನೀಡುವ ಸಲುವಾಗಿ ಅಹ್ಮದೀಯ ಮುಸ್ಲಿಂ ಸಂಘಟನೆಯ ಎರಡನೇಯ ಖಲೀಫ (ನೇತಾರ) ಹಜ್ರತ್ ಮಿರ್ಜಾ ಬಶೀರುದ್ದೀನ್ ಮಹ್ಮೂದ್ ಅಹಮದ್ (ರ.ಅ) ಅವರು ೧೯೨೨ ಡಿಸೆಂಬರ್ ೨೫ರಂದು ಈ ಒಂದು ಘಟಕವನ್ನು ಸ್ಥಾಪಿಸಿದರು. ಈ ಮಹಿಳಾ ಘಟಕ ತನ್ನದೇ ಆದ ಕಾರ್ಯನಿರ್ವಾಹಕ ಸಮಿತಿ ಹೊಂದಿದ್ದು, ಇದು ಘಟಕದ ಹಣಕಾಸು, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳು, ಸಾಹಿತ್ಯ ಪ್ರಕಟಣೆಗಳು, ಮುಖ್ಯವಾಗಿ ಮಕ್ಕಳ ನೈತಿಕ ಪಾಲನೆಗೆ ಒತ್ತು ನೀಡುತ್ತದೆ.
ವರ್ಷವಿಡೀ ಕಾರ್ಯಕ್ರಮ
ಇದೀಗ ಶತಮಾನದ ಸಂಭ್ರಮದಲ್ಲಿರುವ ಸಂಘಟನೆಯು ಸಂಭ್ರಮಾಚರಣೆಯನ್ನು ಕೇವಲ ಒಂದು ದಿವಸಕ್ಕೆ ಸೀಮಿತಗೊಳಿಸದೆ ವರ್ಷವಿಡೀ ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಮಾಜದಲ್ಲಿ ಮಹಿಳೆಯರಿಗಿರುವ ಸ್ಥಾನಮಾನದ ಕುರಿತು ಜನ ಸಾಮಾನ್ಯರಿಗೆ ಅರಿವು ಮೂಡಿಸಲು ಸಾಮಾಜಿಕ ಸೇವೆ, ಕರ್ತವ್ಯ, ರಕ್ತದಾನ, ಆರೋಗ್ಯ ಶಿಬಿರ, ಶ್ರಮದಾನ, ಅನಾಥಾಶ್ರಮ ಹಾಗೂ ಬಡವರಿಗೆ ಧನ ಹಾಗೂ ವಸ್ತುಗಳ ಸಹಾಯ ಮಾಡುವಂತಹ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ದಿನಾಂಕಗಳನ್ನು ಇನ್ನಷ್ಟೇ ನಿಗದಿಪಡಿಸ ಲಿದ್ದು, ನಂತರ ನಿರಂತರವಾಗಿ ಕಾರ್ಯಕ್ರಮಗಳು ನಡೆಯಲಿವೆ. ಅಹ್ಮದೀಯ ಮುಸ್ಲಿಂ ಜಮಾಅತ್ ಹಾಗೂ ಮಹಿಳಾ ಘಟಕಗಳ ಕಚೇರಿ ಮಡಿಕೇರಿಯ ಹಿಲ್ ರಸ್ತೆಯಲ್ಲಿರುವ ಮಸ್ಜಿದ್ ಬೈತುಲ್ ಹುದಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
-ಸಂತೋಷ್