ಪೊನ್ನಂಪೇಟೆ, ಜ. ೩: ಇತ್ತೀಚೆಗೆ ಗೋಣಿಕೊಪ್ಪಲು ಸಮೀಪದ ಅತ್ತೂರುವಿನಲ್ಲಿರುವ ನ್ಯಾಷನಲ್ ಅಕಾಡೆಮಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಸೈನಿಕ ಕರ್ನಲ್ ಸಿ.ಪಿ. ಮುತ್ತಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಜೀವನದಲ್ಲಿ ಶಿಕ್ಷಣ ಮತ್ತು ಶಿಸ್ತು ಬಹಳ ಮುಖ್ಯ. ಇವು ವ್ಯಕ್ತಿಯನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಸಾಧನಗಳಾಗಿವೆ ಎಂದರು. ಮತ್ತೋರ್ವ ಅತಿಥಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಶಾಲೆಯ ಮುಖ್ಯಸ್ಥೆ ಶಾಂತಿ ಅಚ್ಚಪ್ಪ ಮಾತನಾಡಿ, ಒಂದು ಸಂಸ್ಥೆಯ ಬೆಳವಣಿಗೆಗೆ ಶಾಲೆಯ ಆಡಳಿತ ಮಂಡಳಿಯಷ್ಟೇ ಜವಾ ಬ್ದಾರಿಯು ಶಿಕ್ಷಕರಿಗೂ, ಪೋಷಕರಿಗೂ, ವಿದ್ಯಾರ್ಥಿಗಳಿಗೂ ಇದೇ ಎಂಬುದನ್ನು ಮರೆಯಬಾರದು. ಇದನ್ನು ಅರಿತು ಎಲ್ಲರೂ ಮುಂದೆ ಸಾಗಬೇಕು. ಆಗ ಮಾತ್ರ ಸಂಸ್ಥೆಯು ಅತ್ಯುತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ರೀತಿಯ ವಸ್ತು ಪ್ರದರ್ಶನ, ವಿಜ್ಞಾನ ವಿಭಾಗದ ಯುರೇಕಾ ಸೈನ್ಸ್ ಕ್ಲಬ್ಬಿನ ವಸ್ತು ಪ್ರದರ್ಶನ ಮೆಚ್ಚುಗೆ ಪಡೆದುಕೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕ, ನೃತ್ಯ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮಗಳು ನಡೆದವು. ಬೆಳಗಾವಿಯ ವಿಜ್ಞಾನ ಸಂಶೋಧನಾ ವಿಭಾಗದ ಡಾ. ಗೋಯಲ್ ಅವರ ಪುತ್ರಿ ಡೆನ್ಮಾರ್ಕಿನಲ್ಲಿ ವಿಜ್ಞಾನಿ ಹಾಗೂ ಗಾಯಕಿ ಅನಿಷಾ ಗೋಯಲ್ ಸಂಗೀತ ಸುಧೆಯನ್ನು ಹರಿಸಿದರು. ಪ್ರಾಂಶುಪಾಲೆ ಪುಷ್ಪ ಶಾಲಾ ವಾರ್ಷಿಕ ವರದಿ ವಾಚಿಸಿದರು. ಆಸ್ಟಿನ್, ಜುಹೈನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ. ಗೋಯಲ್, ಸಂಸ್ಥೆಯ ಟ್ರಸ್ಟಿ ರಕ್ಷಿತ್ ಅಯ್ಯಪ್ಪ, ಹಾಸ್ಯ ಅಯ್ಯಪ್ಪ, ಪೋಷಕರು, ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.