ಮಡಿಕೇರಿ, ಜ. ೧: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ೨೦೨೨-೨೩ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಬಳಕೆಯಾಗದ ಅನುದಾನದಲ್ಲಿ ಜಿಲ್ಲೆಗೆ ೧ ಗುರಿಯನ್ನು ನಿಗದಿಪಡಿಸಿದ್ದು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ-ಉದ್ಯೋಗ ಹಮ್ಮಿಕೊಳ್ಳಲು ಉದ್ಯೋಗಿನಿ ಯೋಜನೆಯಡಿ ಬ್ಯಾಂಕ್ ಸಾಲ ಹಾಗೂ ನಿಗಮದ ಸಹಾಯಧನದೊಂದಿಗೆ ಸೌಲಭ್ಯ ನೀಡಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಉದ್ಯೋಗಿನಿ ಯೋಜನೆಯಡಿ ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಬಳಕೆಯಾಗದ ಅನುದಾನದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ-ಉದ್ಯೋಗ ಹಮ್ಮಿಕೊಳ್ಳಲು ಉದ್ಯೋಗಿನಿ ಯೋಜನೆಯಡಿ ವಿವಿಧ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆದು ಕೃಷಿ, ಹಾಗೂ ಕೃಷಿಯೇತರ ಚಟುವಟಿಕೆಗಳ (ಹಂದಿ, ಆಡು, ಕೋಳಿ ಸಾಕಾಣಿಕೆ, ನರ್ಸರಿ, ಬ್ಯೂಟಿಪಾರ್ಲರ್, ಟೈಲರಿಂಗ್, ವ್ಯಾಪಾರ ಮತ್ತಿತರ) ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು ೧೮ ರಿಂದ ೫೫ ವರ್ಷ ವಯೋಮಿತಿಗೊಳಪಟ್ಟು ಬಡತನ ರೇಖೆಯ ಒಳಪಡುವ ಪಡಿತರ ಚೀಟಿ ಹೊಂದಿದ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಮಾತ್ರ ಅವಕಾಶವಿದೆ.
೧೮ ರಿಂದ ೫೫ ವರ್ಷದೊಳಗಿನ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಘಟಕ ವೆಚ್ಚ ರೂ. ೧ ಲಕ್ಷದಿಂದ ರೂ. ೩ ಲಕ್ಷ ಹಾಗೂ ಶೇ. ೫೦ ಸಹಾಯಧನ ನೀಡಲಾಗುವುದು ಮತ್ತು ಕುಟುಂಬದ ವಾರ್ಷಿಕ ಆದಾಯ ರೂ. ೨ ಲಕ್ಷಕ್ಕೆ ಮೀರಬಾರದು. ಜಾತಿ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಬಿಪಿಎಲ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ, ಫಲಾನುಭವಿಯು ಚಟುವಟಿಕೆ ಮಾಡುತ್ತಿರುವ ಫೋಟೋ.
ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್ ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ ಇಲ್ಲಿ ಈ ಯೋಜನೆಯ ಅರ್ಜಿಗಳು ಲಭ್ಯವಿದ್ದು ಅರ್ಹ ಮಹಿಳೆಯರು ಈ ಕಚೇರಿಗಳಿಂದ ಜನವರಿ ೫ ರೊಳಗೆ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ದ್ವಿ ಪ್ರತಿಯಲ್ಲಿ ಜನವರಿ ೧೦ ರೊಳಗೆ ಸಲ್ಲಿಸಬೇಕು.
ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದರಿಂದ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು (ಪ.ಪಂ.) ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಆಸಕ್ತಿ ಇರುವ ಮಹಿಳೆಯರು ದೂ. ೦೮೨೭೨-೨೯೮೩೭೯, ೯೯೮೦೬೩೨೩೫೨ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.