ಪೊನ್ನಂಪೇಟೆ, ಜ. ೧: ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ೨೩ನೇ ವರ್ಷದ ಜ್ಯೋತಿ ಪ್ರದಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ತತ್ವ ರೂಪಾನಂದಾಜಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಅಧ್ಯಾತ್ಮಿಕತೆಯ ಬಗ್ಗೆಯೂ ಒಲವು ತೋರಿಸುವ ಅವಶ್ಯಕತೆ ಇದೆ. ಪ್ರಾಚೀನ ಕಾಲದ ಗುರುಕುಲ ಪದ್ಧತಿಯ ಆಚಾರ ವಿಚಾರಗಳನ್ನು ಇಂದಿಗೂ ಸಾಯಿಶಂಕರ ವಿದ್ಯಾ ಸಂಸ್ಥೆಯು ಜೀವಂತವಾಗಿರಿಸಿ ಕೊಂಡಿದೆ. ಜ್ಯೋತಿ ಪ್ರದಾನದಂತಹ ವಿಶೇಷ ಕಾರ್ಯಕ್ರಮಗಳು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಧನಾತ್ಮಕತೆಯನ್ನು ತುಂಬುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮುಖ್ಯಸ್ಥರಾದ ಕೋಳೆರ ಝರು ಗಣಪತಿ ಮಾತನಾಡಿ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ನಾಗರಿಕರಾಗಿ, ಜಾತಿಬೇಧ ಮಾಡದೇ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು.ಕಾರ್ಯಕ್ರಮದಲ್ಲಿ ಜ್ಯೋತಿ ಪ್ರದಾನ ನೆರವೇರಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಅತಿಥಿಗಳಾದ ವಿಂಗ್ ಕಮಾಂಡರ್ ಸಿ.ಸಿ. ಅಪ್ಪಣ್ಣ, ಅಕಾಡೆಮಿಕ್ ಕಮಿಟಿ ಸದಸ್ಯ ಅರಮಣಮಾಡ ಸತೀಶ್ ದೇವಯ್ಯ, ಟ್ರಸ್ಟಿ ಗೌರವ್ ಕಾರ್ಯಪ್ಪ, ಗಾನ ಕಾರ್ಯಪ್ಪ, ಆಡಳಿತಾಧಿಕಾರಿ ರಮ್ಯಾ, ಪ್ರಾಂಶುಪಾಲರಾದ ಪಿ.ಎ. ನಾರಾಯಣ್, ಗೀತಾ ನಾಯ್ಡು, ಮುಖ್ಯೋಪಾಧ್ಯಾಯರುಗಳಾದ ನಿವ್ಯ, ರೀನಾ, ಅಕಾಡೆಮಿಕ್ ಕಮಿಟಿ ಸದಸ್ಯರು, ಪೋಷಕರು, ಬೋಧಕ, ಬೋಧಕೇತರ ವೃಂದದವರು ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.