ವೀರಾಜಪೇಟೆ, ಜ. ೧: ಕೊಡಗು ಜಿಲ್ಲೆಯು ಕ್ರೀಡೆ, ಸಂಸ್ಕೃತಿ, ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಅದರಂತೆ ಎಲೆಮರೆಯ ಕಾಯಿಯಂತೆ ಚಿತ್ರಕಲೆಯು ಒಂದು ಭಾಗವಾಗಿ ಇಂದು ಅನೇಕ ಹೆಸರುವಾಸಿ ಚಿತ್ರಕಲಾವಿದರನ್ನು ಪುಟ್ಟ ಜಿಲ್ಲೆಯು ಹುಟ್ಟುಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ನಗರದ ನಿವಾಸಿ ಹಾಗೂ ಹವ್ಯಾಸಿ ಚಿತ್ರಕಲಾವಿದ ಸಾದಿಕ್ ಹಂಸ ಅವರ ಅವಿರತ ಶ್ರಮದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಸಾದಿಕ್ ಆರ್ಟ್ ಲಿಂಕ್ಸ್ ಸಂಯುಕ್ತ ಆಶ್ರಯದಲ್ಲಿ ಕಲಾ ಶಿಬಿರ - ಕಲಾ ಉತ್ಸವ ಕೊಡಗು ೨೦೨೨ ಎಂಬ ಕಾರ್ಯಕ್ರಮ ಪಟ್ಟಣದ ಮೊಗರಗಲ್ಲಿಯಲ್ಲಿರುವ ಸಾದಿಕ್ ಆರ್ಟ್ ಕಲಾಭೂಮಿಯಲ್ಲಿ ನಡೆಯುತ್ತಿದ್ದು, ಶಿಬಿರದಲ್ಲಿ ಸಾರ್ವಜನಿಕರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಚಿತ್ರಕಲೆಯ ಬಗ್ಗೆ ಕೊಡಗಿನ ಚಿತ್ರಕಲಾವಿದರ ಕುಂಚದಿAದ ಅರಳಿದ ಚಿತ್ರಕಲೆಗಳ ಸ್ವಾದವನ್ನು ಪರಿಚಯಿಸಿಕೊಂಡರು.

ಕಲಾ ಶಿಬಿರವು ತಾ.೨೧ ರಂದು ಆರಂಭವಾಗಿದ್ದು ೩೧ ರಂದು ಕೊನೆಗೊಂಡಿತು. ಶಿಬಿರದಲ್ಲಿ ಕೊಡಗಿನ ಹೆಸರಾಂತ ಚಿತ್ರಕಲಾವಿದರಾದ ಬಿ.ಆರ್. ಸತೀಶ್, ರೂಪೇಶ್ ನಾಣಯ್ಯ, ಪ್ರಸನ್ನ ಕುಮಾರ್, ರಾಮ್ ಗೌತಮ್, ಬಾವ ಮಾಲ್ದಾರೆ ಮತ್ತು ಚಿತ್ರಕಲಾ ಪರಿಷತ್‌ನ ವಿದ್ಯಾರ್ಥಿಯಾದ ಭುವನೇಶ್ವರಿ ಯೋಗೀಶ್ ಮೊದಲಾದವರ ಕುಂಚದಿAದ ಚಿತ್ರಿತವಾದ ಚಿತ್ರಕಲೆಗಳು ಕಲಾ ಭೂಮಿಯಲ್ಲ್ಲಿ ಪ್ರದರ್ಶನಗೊಂಡವು.

ಮೊಗರಗಲ್ಲಿಯ ನಿವಾಸಿ ಎ.ಎ. ಹಂಸ ಅವರ ಪುತ್ರ ಹವ್ಯಾಸಿ ಚಿತ್ರಕಲಾವಿದರಾದ ಸಾಧಿಕ್ ಅವರು ಕೊಡಗಿನ ಹೆಸರಾಂತ ಚಿತ್ರಕಲಾವಿದರನ್ನು ಒಂದೇ ಸೂರಿನಡಿಯಲ್ಲಿ ಕರೆತಂದು ಚಿತ್ರಕಲೆಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಚಿತ್ರಕಲೆ ಪ್ರದರ್ಶನ, ಶಿಲ್ಪಕಲೆ, ಪ್ರತಿಷ್ಠಾಪನಾಕಲೆ, ಛಾಯಾಚಿತ್ರಕಲೆ ನಿರ್ಮಾಣ ಮತ್ತು ಪ್ರದರ್ಶನ ಹೀಗೆ ನಾನಾ ಚಿತ್ರ ಪ್ರಕಾರಗಳನ್ನು ಚಿತ್ರಕಲಾ ರಸಿಕರಿಗೆ ರಸದೌತಣ ಉಣಬಡಿಸುತ್ತಿದ್ದಾರೆ.

ಕಲಾ ಶಿಬಿರದಲ್ಲಿ ಕಲೆಯ ಬಗ್ಗೆ ವಿವರಿಸಿದ ಸಾದಿಕ್ ಅವರು ಇಂದು ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮವು ನಾಗಾಲೋಟದಲ್ಲಿ ಬೆಳೆಯತೊಡಗಿದೆ. ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಚಿತ್ರಕಲೆಯನ್ನು ಪರಿಚಯಿಸುವ ವೇದಿಕೆ ನೀಡಿದಲ್ಲಿ ಕೊಡಗು ಜಿಲ್ಲೆಯಲ್ಲಿರುವ ಚಿತ್ರಕಲೆಗಾರರ ಚಿತ್ರಗಳ ಬಿಕರಿಯೊಂದಿಗೆ ಚಿತ್ರಕಲೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಕೊಡಗಿನ ಬಹುಮುಖ ಕಲೆಗಳು ರಾಜ್ಯವಲ್ಲದೆ ದೇಶದಾದ್ಯಂತ ಪ್ರಖ್ಯಾತಿಗೊಳ್ಳಬೇಕು. ಜಿಲ್ಲೆಯ ಪ್ರತಿಯೊಬ್ಬ ಚಿತ್ರಕಲೆಗಾರನಿಗೂ ಗೌರವ ಲಭಿಸಿದಲ್ಲಿ ಚಿತ್ರಕಲೆ ಜೀವಂತವಾಗಿರಿಸುವಲ್ಲಿ ಸಂದೇಹವಿಲ್ಲ ಎಂದರು.

ಕಲಾವಿದ ಬಾವಾ ಮಾಲ್ದಾರೆ ಮಾಹಿತಿ ನೀಡುತ್ತಾ, ಕೊಡಗಿನಲ್ಲಿ ನಾನಾ ರೀತಿಯ ಚಿತ್ರ ಕಲಾವಿದರಿದ್ದಾರೆ, ಕುಂಚದಿAದ ಚಿತ್ರಿತವಾದ ಚಿತ್ರಕಲೆಯನ್ನು ಪ್ರದರ್ಶನ ಮಾಡಲು ವೇದಿಕೆ ಕಲ್ಪಿಸಿ ಸಾರ್ವಜನಿಕರಿಗೆ ಕಲೆಯ ಬಗ್ಗೆ ಆಸಕ್ತಿ ಬೆಳೆಸುವಂತೆ ಮಾಡಲು ಸರ್ಕಾರವು ಸ್ಥಳಾವಕಾಶ ನೀಡಿದಲ್ಲಿ ನಿರಂತರವಾಗಿ ಕಲೆಯನ್ನು ಬೆಳೆಸಲು ಕಲಾವಿದರು ಒಂದೇ ಸೂರಿನಡಿಯಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶನ ಮಾಡಬಹುದಾಗಿದೆ. ಕರ್ನಾಟಕ ರಾಜ್ಯದ ಬೃಹತ್ ನಗರಗಳಲ್ಲಿ ಚಿತ್ರಸಂತೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಚಿತ್ರಕಲೆ ಪ್ರದರ್ಶನ ಮತ್ತು ಮಾಹಿತಿ ಹಾಗೂ ಮಾರಾಟ ಮಾಡುವ ವೇದಿಕೆ ಕಲ್ಪಿಸಬೇಕು. ಅದರಂತೆ ಕೊಡಗಿನಲ್ಲಿ ಈ ರೀತಿಯ ವ್ಯವಸ್ಥೆಯನ್ನು ಜಾರಿಗೆ ತಂದಲ್ಲಿ ಸ್ಥಳೀಯ ಚಿತ್ರ ಕಲಾವಿದರಿಗೆ ಪ್ರೋತ್ಸ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.

ಇಂದು ಚಿತ್ರಕಲೆಯಲ್ಲಿ ಪೈಪೋಟಿ ಬೆಳೆದಿದೆ. ಚಿತ್ರಕಲೆಯಲ್ಲಿ ಕಲಿಯುವಂತದ್ದು ಬಹಳಷ್ಟಿದೆ. ತಾನು ಕಲಿತ ವಿದ್ಯೆ ಪರರ ಮುಂದೆ ಪ್ರದರ್ಶನ ಮಾಡಿದಲ್ಲಿ ನಿಜವಾದ ಅರ್ಥ ಬರುತ್ತದೆ ಎಂದು ರವಿವರ್ಮ ದೃಶ್ಯ ಮಾಧÀ್ಯಮ ಮತ್ತು ಕಲಾ ಪರಿಷತ್ ಕಾಲೇಜಿನ ವಿದ್ಯಾರ್ಥಿ ಸುನದ್ ಹೇಳಿದರು.

ಚಿತ್ರಕಲಾ ಪರಿಷತ್‌ನ ವಿದ್ಯಾರ್ಥಿಗಳು ಭಾಗವಹಿಸಿ ಅಭಿಪ್ರಾಯಗಳನ್ನು ಹಂಚಿಕೊAಡು ಮಾತನಾಡುತ್ತಾ, ಚಿತ್ರಕಲೆಯ ಶಿಕ್ಷಣದಲ್ಲಿ ಹಲವಾರು ವಿಷಯಾಧಾರಿತ ಪದವಿಗಳಿದ್ದು, ಆಯ್ಕೆಯು ವಿದ್ಯಾರ್ಥಿಯ ವಿವೇಚನೆಗೆ ಬಿಟ್ಟಿದ್ದು. ಸಾಮಾಜಿಕ ಕಳಕಳಿಯ ಚಿತ್ರಣವನ್ನು ಚಿತ್ರಗಳ ಮೂಲಕ ನಾಡಿನ ಸಮಸ್ತ ಸಾರ್ವಜನಿಕರಿಗೆ ತಿಳಿಯಪಡಿಸುವ ಉದ್ದೇಶವಿದೆ. ಚಿತ್ರಕಲೆಯ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ. ಜಿಲ್ಲೆಯ ವಿದ್ಯಾರ್ಥಿಗಳು ಚಿತ್ರಕಲೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಕಲೆಗೆ ಹೊಸ ಅಧ್ಯಾಯ ತೋರಿಸಿಕೊಟ್ಟಂತಾಗುತ್ತದೆ ಎಂದರು.

ಸಾದಿಕ್ ಅವರು ೨೦೧೭ ರಿಂದ ಇಲಾಖೆ ಮತ್ತು ದಾನಿಗಳ ನೆರವಿನಿಂದ ಚಿತ್ರಕಲೆ ಪ್ರದರ್ಶನ ಕೂಕ್ಲೂರುವಿನಲ್ಲಿ ಆಯೋಜನೆ ಮಾಡುತ್ತಾ ಬಂದಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂತರರಾಷ್ಟಿçÃಯ ಚಿತ್ರಕಲಾವಿದರಾದ ಜ್ಯೋತಿಲಾಲ್ ಕೊಲ್ಲಂ ಮತ್ತು ರಾಜಪ್ಪನ್ ಆಚಾರಿ ಚೆಂಗನಶೇರಿ ಇವರುಗಳು ೧೫ ದಿನಗಳ ಕಲಾ ಉತ್ಸವದಲ್ಲಿ ಭಾಗಿಯಾಗಿ ಅಪೂರ್ವವಾದ ಕಲಾ ಕುಂಚದಿAದ ಚಿತ್ರಕಲೆಯ ಪ್ರದರ್ಶನ ಮಾಡಿದ್ದರು.

ಕಲಾ ಉತ್ಸವದಲ್ಲಿ ವಿವಿಧ ಕಲಾವಿದರು ರಚಿಸಿರುವ ಚಿತ್ರಕಲೆಗಳು ಕಲಾರಸಿಕರನ್ನು ತುದಿಕಾಲ ಮೇಲೆ ನಿಲ್ಲುವಂತೆ ಮಾಡಿತು.