ಸೋಮವಾರಪೇಟೆ, ಡಿ. ೩೧: ಲೋಕೋಪಯೋಗಿ ಇಲಾಖೆ ಮೂಲಕ ರೂ.೩.೭೫ ಕೋಟಿ ವೆಚ್ಚದಲ್ಲಿ ಡಾಂಬರೀಕರಣಗೊಳ್ಳುತ್ತಿರುವ ಮಡಿಕೇರಿ-ಮಾದಾಪುರ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪರಿಶೀಲಿಸಿದರು.
ರಸ್ತೆಗೆ ಹಾಕುತ್ತಿರುವ ಡಾಂಬರಿನ ಪ್ರಮಾಣ, ರಸ್ತೆ ಬದಿಯ ಚರಂಡಿ ನಿರ್ಮಾಣ, ಮೋರಿ ಕಾಮಗಾರಿಗಳನ್ನು ವೀಕ್ಷಿಸಿದ ಶಾಸಕರು, ಗುಣಮಟ್ಟಕ್ಕೆ ಆದ್ಯತೆ ನೀಡಬೇಕೆಂದು ಅಭಿಯಂತರ ವಿಜಯಕುಮಾರ್ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಕೊಡ್ಲಿಪೇಟೆಯಿಂದ- ಮಡಿಕೇರಿವರೆಗಿನ ರಸ್ತೆ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿಗಳು ಆರಂಭವಾಗಿವೆ. ಇದರೊಂದಿಗೆ ಬಾಣಾವರದಿಂದ ಸೋಮವಾರಪೇಟೆ ಪಟ್ಟಣ ಸಂಪರ್ಕಿಸುವ ರಾಜ್ಯ ಹೆದ್ದಾರಿ ಡಾಂಬರೀಕರಣಕ್ಕೆ ೧೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ನಂತರ ಕೆಲಸ ಆರಂಭವಾಗಲಿದೆ ಎಂದರು.
ಮಸಗೋಡು- ಸೀಗೆಹೊಸೂರು-ಕಣಿವೆ ರಸ್ತೆ ಅಭಿವೃದ್ಧಿಗೆ ೫ ಕೋಟಿ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.