ವೀರಾಜಪೇಟೆ, ಜ. ೧: ವಿಶೇಷಚೇತನರು ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಸಿ. ವಿಶ್ವನಾಥ್ ಹೇಳಿದರು.
ವೀರಾಜಪೇಟೆ ಬಳಿಯ ಬಿಟ್ಟಂಗಾಲದ ವಿಎಸ್ಎಸ್ಎನ್ಎಲ್ ಸಭಾಂಗಣದಲ್ಲಿ ನಡೆದ ‘ವಿಶೇಷಚೇತನರ ಸಮನ್ವಯ ಗ್ರಾಮ ಸಭೆ’ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಸರಕಾರ ವಿಶೇಷಚೇತನರಿಗೆ ಶೇ. ೫ರ ಅನುದಾನದಲ್ಲಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ ಹಾಗೂ ಮಹತ್ಮಗಾಂಧಿ ರಾಷ್ಟಿçÃಯ ಉದ್ಯೋಗಖಾತ್ರಿ ಯೋಜನೆಯಲ್ಲಿ ಸೌಲಭ್ಯಗಳನ್ನು ಪಡೆದುಕೊಂಡು ಸ್ವ ಉದ್ಯೋಗದ ಮೂಲಕ ಮುಂದೆ ಬರಬೇಕು. ವಿಶೇಷಚೇತನರು ಇತರ ಸಾಮಾನ್ಯ ಜನರಂತೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕ್ರೀಡಾ ಪ್ರತಿಭೆಯನ್ನು ಹೊರಹೊಮ್ಮಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.
ಬೋಟೋಳಿ ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಆಯೇಷಾ ಅವರು ಮಾತನಾಡಿ ಸರಕಾರ ವಿಶೇಷಚೇತನರಿಗಾಗಿ ವೀಲ್ ಚೇರ್, ದ್ವಿಚಕ್ರ ವಾಹನ, ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ವಿದ್ಯಾರ್ಥಿವೇತನ, ವೈದ್ಯಕೀಯ ವೆಚ್ಚ ನೀಡುತ್ತಿದೆ. ಕಣ್ಣಿನ ತೊಂದರೆ ಇದ್ದಲ್ಲಿ ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಹಾಗೂ ಬುದ್ದಿಮಂದ ಮಕ್ಕಳು ಮತ್ತು ವೃದ್ಧರಿಗೆ ಪಿಂಚಣಿ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ಸಭೆಯಲ್ಲಿ ತಿಳಿಸಿದರು. ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಆರ್. ರಮ್ಯ ಅವರು ವಿಶೇಷಚೇತನರ ಸಮನ್ವಯ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ವಿಶೇಷಚೇತನರು ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತಾಗಬೇಕು ಎಂದರು. ಬಿಟ್ಟಂಗಾಲ ಸಮುದಾಯ ಆರೋಗ್ಯ ಅಧಿಕಾರಿ ಸಂಗೀತಾ ಮಾತನಾಡಿ, ವಿಶೇಷಚೇತನರಿಗಾಗಿ ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಬಗ್ಗೆ ಮಾಹಿತಿ ನೀಡಿದರು.
ಬಿಟ್ಟಂಗಾಲ ಪಂಚಾಯಿತಿ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತೆ ಹಸೀನ ಅವರು ಸ್ವಾಗತಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿದರು, ವಿಶೇಷಚೇತನರ ಗ್ರಾಮ ಸಭೆಯಲ್ಲಿ ಪಂಚಾಯಿತಿ ಸದಸ್ಯರಾದ ಎಂ. ಸುಬ್ಬಯ್ಯ, ಪದ್ಮಾವತಿ, ಕೆ. ಉತ್ತಪ್ಪ, ಸಿ. ಕಾವೇರಪ್ಪ, ಸಿ.ಬಿ. ಸೋಮಯ್ಯ, ಎನ್. ಬೋಪಣ್ಣ, ಕಾರ್ಯದರ್ಶಿ ಸತೀಶ್ ಮತ್ತು ಮಾಚಯ್ಯ ಉಪಸ್ಥಿತರಿದ್ದರು. ವಿಶೇಷಚೇತನರು ಮತ್ತು ಪೋಷಕರು ಸಭೆಯಲ್ಲಿ ಭಾಗವಹಿಸಿದ್ದರು.