ಮಡಿಕೇರಿ, ಡಿ. ೩೧: ಕ್ರಷರ್ ಹಾಗೂ ಕಲ್ಲುಕೋರೆ ಮಾಲೀಕರು ನಡೆಸುತ್ತಿರುವ ಪ್ರತಿಭಟನೆಯಿಂದ ಲಾರಿ ಮಾಲೀಕರು, ಚಾಲಕರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಜಿಲ್ಲೆಯಲ್ಲಿ ತಲೆದೋರಿರುವ ಕಟ್ಟಡ ಉತ್ಪನ್ನಗಳ ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂಬ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆ ಕೊಡಗು ಜಿಲ್ಲಾ ಲಾರಿ ಮಾಲೀಕರ ಮತ್ತು ಚಾಲಕರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.

ಜನರಲ್ ತಿಮ್ಮಯ್ಯ ವೃತ್ತದಿಂದ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿ, ಬೇಡಿಕೆ ಈಡೇರಿಕೆಗೆ ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಮಸೂದ್ ಮಹಮ್ಮದ್ ಮಾತನಾಡಿ, ಕ್ರಷರ್ ಘಟಕಗಳು ಸ್ಥಗಿತಗೊಂಡ ಪರಿಣಾಮ ದೊಡ್ಡ ಮಟ್ಟದಲ್ಲಿ ಉತ್ಪನ್ನಗಳ ಕೊರತೆ ಏರ್ಪಟ್ಟಿದೆ. ಬೇರೆ ಜಿಲ್ಲೆ, ರಾಜ್ಯದಿಂದ ವಿವಿಧ ರೀತಿ ಉತ್ಪನ್ನಗಳನ್ನು ತರಬೇಕೆಂದರೆ ಖರ್ಚು ದುಪ್ಪಟ್ಟಾಗುತ್ತದೆ. ಇದರೊಂದಿಗೆ ಸುಮಾರು ೧೫೦೦ ಲಾರಿ ಮಾಲೀಕ ಕುಟುಂಬ, ೩ ಸಾವಿರಕ್ಕೂ ಹೆಚ್ಚು ಲಾರಿ ಚಾಲಕರು, ೫ ಸಾವಿರದಷ್ಟು ಕಾರ್ಮಿಕರು ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಜಿಲ್ಲಾಡಳಿತ ಈ ಸಂಬAಧ ಕ್ರಷರ್ ಮಾಲೀಕರನ್ನು ಕರೆಸಿ ಸಂಧಾನ ನಡೆಸುವುದು ಅಥವಾ ಬೇರೆ ಜಿಲ್ಲೆ, ರಾಜ್ಯಗಳಿಂದ ಅಗತ್ಯ ಕಟ್ಟಡ ಉತ್ಪನ್ನಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಬೇಕು. ಇದರಿಂದ ಕೊರತೆ ನೀಗುವುದರ ಜೊತೆಗೆ ಕಾರ್ಮಿಕರಿಗೂ ಸಹಕಾರಿಯಾಗುತ್ತದೆ ಎಂದರು. ಪ್ರತಿಭಟನೆಯಲ್ಲಿ ಸಂಘದ ಖಜಾಂಜಿ ಆರ್. ಮಂಜು, ಸಂಘಟನಾ ಕಾರ್ಯದರ್ಶಿ ಎಂ.ಎ. ಸಿಜು, ಕಾನೂನು ಮತ್ತು ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ. ಬೋಪಣ್ಣ, ಸದಸ್ಯ ಡಿ. ಕೆಂಚಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷ ಬಿ.ಜಿ. ಮೋಹನ್, ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.