ಮಡಿಕೇರಿ, ಡಿ. ೩೧: ವರ್ಷಪೂರ್ತಿ ಶ್ರಮವಹಿಸಿ ದುಡಿದು ಇನ್ನೇನು ಧಾನ್ಯ ಲಕ್ಷ್ಮಿ ಯನ್ನು ಮನೆ ತುಂಬಿಕೊAಡು ಸಂಭ್ರಮಿಸಬೇಕಿದ್ದ ರೈತ ಆನೆಧಾಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿಯಂತೆ ಪರಿತಪಿಸುವಂತಾದ ಘಟನೆ ಮಗ್ಗುಲ ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದ ಪ್ರಗತಿಪರ ರೈತ ಪುಲಿಯಂಡ ಜಗದೀಶ್ ಕಳೆದ ಒಂದು ವಾರದಿಂದ ಕಟಾವು ಮಾಡಿ ಸ್ವಚಗೊಳಿಸಿ ಸಿದ್ದಪಡಿಸಿ ಮನೆಗೆ ಸಾಗಿಸಲು ಮೂಟೆಗಳಲ್ಲಿ ತುಂಬಿಸಿ ಕಣದಲ್ಲಿಟ್ಟಿದ್ದ ಭತ್ತದ ಮೂಟೆಗಳನ್ನು ತಡರಾತ್ರಿಯಲ್ಲಿ ಬಂದ ಗಜಪಡೆಗಳು ನಾಶಪಡಿಸಿ ಅನ್ನದಾತನ ವರ್ಷದ ಕೂಳಿಗೆ ಕಂಟಕ ತಂದಿವೆ.
ಭತ್ತದ ಬೆಳೆ ಪ್ರಯಾಸದ ಎಂದು ಅರಿವಿದ್ದರೂ ನಮ್ಮ ಸಾಂಪ್ರದಾಯಿಕ ಬೆಳೆ ಎಂಬ ಭಾವನೆಯಿಂದ ಹೆಚ್ಚಿನ ಮಹತ್ವ ನೀಡಿ ಭತ್ತ ಕೃಷಿ ಮಾಡಿದ್ದು ಈಗ ಸುಮಾರು ಇಪ್ಪತ್ತು ಕ್ವಿಂಟಾಲ್ ನಷ್ಟು ಸಿದ್ದಪಡಿಸಿದ ಭತ್ತದ ಮೇಲೆ ಆನೆಗಳು ಧಾಳಿಮಾಡಿ ನಾಶಪಡಿಸಿವೆ. ‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬ ನಾಣ್ನುಡಿಯಂತೆ ರೃತರ ಬದುಕು ಆಗಿದೆ ಎಂದು ಪುಲಿಯಂಡ ಜಗದೀಶ್ ಬೇಸರ ವ್ಯಕ್ತಪಡಿಸಿದ್ದಾರೆ. ಕೊಡಗಿನ ಆನೆ ಮತ್ತು ಮಾನವ ಸಂಘರ್ಷಗಳ ಬಗ್ಗೆ ವಿಧಾನಸೌಧದವರೆಗೆ ಚರ್ಚೆಗಳು ಆಗುತ್ತವೆಯೇ ಹೊರತು ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.