ಸೋಮವಾರಪೇಟೆ, ಡಿ. ೩೦: ತಾಲೂಕಿನ ಮಾದಾಪುರ ಸಮೀಪದ ಇಗ್ಗೋಡ್ಲು ಹಾಗೂ ಜಂಬೂರು ಭಾಗದ ನೂರಾರು ರೈತರಿಗೆ ಸರ್ಕಾರದ ಪರಿಹಾರ ಧನ ಲಭಿಸಿಲ್ಲ. ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಈವರೆಗೆ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇಗ್ಗೋಡ್ಲು ಗ್ರಾಮ ವ್ಯಾಪ್ತಿಯಲ್ಲಿ ಕಳೆದ ೨೦೧೮ರಲ್ಲಿ ಭಾರೀ ಮಳೆಗೆ ಭೂಕುಸಿತಗಳು ಸಂಭವಿಸಿವೆ. ತದ ನಂತರದ ವರ್ಷಗಳಲ್ಲೂ ಅಕಾಲಿಕ ಮಳೆಗೆ ಸಿಲುಕಿ ಕೃಷಿಕರು ಹೆಚ್ಚಿನ ನಷ್ಟ ಅನುಭವಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಅಕಾಲಿಕ ಮಳೆಯಿಂದಾಗಿ ಕಾಫಿ ಹಾಗೂ ಭತ್ತದ ಫಸಲು ತೀರಾ ನೆಲಕ್ಕಚ್ಚಿದ್ದು, ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭ ಎಲ್ಲಾ ಸಮರ್ಪಕ ದಾಖಲಾತಿಗಳನ್ನು ನೀಡಲಾಗಿದೆ. ಆದರೆ ಈವರೆಗೆ ಪರಿಹಾರ ಲಭಿಸಿಲ್ಲ ಎಂದು ಕೃಷಿಕರು ಆರೋಪಿಸಿದ್ದಾರೆ.

ತಕ್ಷಣ ಪರಿಹಾರ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಇಗ್ಗೋಡ್ಲು ಗ್ರಾಮದ ಶ್ರೀಕುಂತೀಶ್ವರ ದೇವಸ್ಥಾನ ಸಮಿತಿಯ ಮೂಲಕ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜಂಬೂರು ಗ್ರಾಮ ವ್ಯಾಪ್ತಿಯ ಕೃಷಿಕರಿಗೂ ಪರಿಹಾರ ಲಭಿಸಿಲ್ಲ. ಈ ಬಗ್ಗೆಯೂ ಗಮನ ಹರಿಸಬೇಕೆಂದು ಜಂಬೂರು ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.