ಕೂಡಿಗೆ, ಡಿ. ೩೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪ ಕಾಳಿದೇವನ ಹೊಸೂರು ಗ್ರಾಮದಲ್ಲಿ ಸರ್ವೆ ನಂಬರ್ ೨/೧ಎ ರಲ್ಲಿ ಬ್ರಿಟಿಷರ ಕಾಲದಿಂದಲೂ ಗೋ ಸದನವಾಗಿ ನಡೆದುಕೊಂಡು ಬರುತ್ತಿದ್ದ ಜಾಗವು ಕಳೆದ ೫ ವರ್ಷಗಳ ಹಿಂದೆ ಸಾಮಾಜಿಕ ಅರಣ್ಯ ಇಲಾಖೆಯ ಹೆಸರಿಗೆ ಖಾತೆಯಾಗಿರುವುದನ್ನು ರದ್ದುಪಡಿಸುವಂತೆ ಕೂಡಿಗೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಯ ತೀರ್ಮಾನ ಕೈಗೊಂಡಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಪತ್ರ ವ್ಯವಹಾರ ಅನ್ವಯ ಕಂದಾಯ ಇಲಾಖೆಯ ಮೈಸೂರು ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿ ಸ್ಥಳÀ ಪರಿಶೀಲನೆ ನಡೆಸಿ ಸಮರ್ಪಕವಾದ ವರದಿಯನ್ನು ನೀಡುವಂತೆ ಪತ್ರ ವ್ಯವಹಾರ ನಡೆದಿದೆ.

ಕಾಳಿದೇವನ ಹೊಸೂರು (ಹುದುಗೂರು) ಗ್ರಾಮದಲ್ಲಿ ಬ್ರಿಟಿಷ್‌ರ ಕಾಲದಿಂದಲೂ ೧೯೫೨ನೇ ಇಸವಿಯಿಂದ ಈ ಜಾಗದಲ್ಲಿ ಗೋ ಸದನ ಹಾಗೂ ಪಶು ಚಿಕಿತ್ಸಾ ಕೇಂದ್ರ, ಪಶುಪಾಲನಾ ಇಲಾಖೆಗೆ ಸೇರಿದ ಮೂರು ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದರಿ ಕಟ್ಟಡಗಳಿಗೆ ಹೊಂದಿಕೊAಡAತೆ ಸಾರ್ವಜನಿಕ ಆಟದ ಮೈದಾನವಿದೆ. ಈ ಮೈದಾನವನ್ನು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯ ಅಡಿಯಲ್ಲಿ ರೂ. ೧೦ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಪ್ಲಡ್ ಲೈಟ್ಸ್ ಅಳವಡಿಕೆ, ಮತ್ತು ವೇದಿಕೆಯ ನಿರ್ಮಾಣ ಕಾರ್ಯ ಮಾಡಲಾಗಿದೆ. ಕಾಮಗಾರಿಗಳ ಕೆಲಸ ನಡೆಯುವಾಗ ಜಾಗದ ಪಹಣೆಯನ್ನು ಪರಿಶೀಲನೆ ನಡೆಸಿದಾಗ ಜಾಗದ ಖಾತೆಯು ಸಾಮಾಜಿಕ ಅರಣ್ಯ ಇಲಾಖೆಯವರ ಖಾತೆಯಲ್ಲಿದ್ದಿದ್ದು ಕಂಡು ಬರುತ್ತದೆ. ಖಾಲಿ ಜಾಗ ಮತ್ತು ಈಗೀನ ಪಶುಪಾಲನಾ ಇಲಾಖೆಯ ಕಟ್ಟಡದ ಜಾಗವು ಸಾಮಾಜಿಕ ಅರಣ್ಯ ಇಲಾಖೆಯ ಹೆಸರಿಗೆ ನೊಂದಣಿ ಆಗಿರುವುದರಿಂದ ನೂತನ ಕಟ್ಟಡಗಳ ನಿರ್ಮಾಣದ ಕಾಮಗಾರಿಗಳು ಸ್ಥಗಿತಗೊಳ್ಳುತ್ತಿವೆ.

ಈಗಾಗಲೇ ಹುದುಗೂರುನಲ್ಲಿ ಪಶು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶದಿಂದ ಪಶುಪಾಲನಾ ಇಲಾಖೆಯ ವತಿಯಿಂದ ಎಲ್ಲಾ ರೀತಿಯ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧಗೊಂಡರೂ ಸಹ, ಖಾತೆಯ ವರ್ಗಾವಣೆಯಿಂದಾಗಿ ಯಾವುದೇ ರೀತಿಯ ಯೋಜನೆಗಳು ಫಲಪ್ರದವಾಗುತ್ತಿಲ್ಲ. ಇದರಿಂದಾಗಿ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫ ಹಾಲು ಉತ್ಪಾದಕರ ಸಹಕಾರ ಸಂಘಗಳ ರೈತರಿಗೆ ಬಾರಿ ತೊಂದರೆಗಳು ಆಗುತ್ತಿವೆ.

ಈ ವ್ಯಾಪ್ತಿಯ ಹುದುಗೂರು ಹಾರಂಗಿ, ಮದಲಾಪುರ ಕೂಡಿಗೆ ಸೀಗೆಹೊಸೂರು, ಕಾಳಿದೇವನ ಹೊಸೂರು, ಮಾವಿನಹಳ್ಳ ಹೆಗ್ಗಡಹಳ್ಳಿ ಸೇರಿದಂತೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿಯೂ ಸಹ ಪಶು ಚಿಕಿತ್ಸಾಲಯಗಳು ಇಲ್ಲದ ಕಾರಣದಿಂದಾಗಿ ಹೈನುಗಾರಿಕೆಗೆ ಬಾರಿ ಹೊಡೆತ ಬೀಳುತ್ತಿದೆ.

ಇದಕ್ಕೆ ಸಂಬAಧಿಸಿದAತೆ ಕಳೆದ ಮೂರು ವರ್ಷಗಳಿಂದ ಈ ವ್ಯಾಪ್ತಿಯ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು, ಸದಸ್ಯರು ಸೇರಿದಂತೆ ಸಾವಿರಾರು ರೈತರು ಆಯಾ ವಾರ್ಡ್ ಸಭೆಯಲ್ಲಿ ಚರ್ಚೆಗಳು ನಡೆದು, ನಂತರ ಗ್ರಾಮ ಸಭೆಯಲ್ಲಿ ಪ್ರಮುಖ ನಿರ್ಣಯ ಮಾಡಿ ಅದರನ್ವಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಆಡಳಿತ ಮಂಡಳಿಯ ನಿರ್ಣಯದಂತೆ ಮೈಸೂರು ವಿಭಾಗದ ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತರಿಗೆ ಸಾಮಾಜಿಕ ಅರಣ್ಯ ಇಲಾಖೆಯ ಹೆಸರಿನ ಖಾತೆಯನ್ನು ರದ್ದುಗೊಳಿಸುವಂತೆ ಮತ್ತು ಹೈನುಗಾರಿಕೆಗೆ ಸಹಾಯಕವಾಗಲು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಹಕಾರ ನೀಡಬೇಕೆಂದು ಗ್ರಾಮ ಪಂಚಾಯಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಮನವಿಯ ಮೇರೆಗೆ ಮೈಸೂರು ಪ್ರಾದೇಶಿಕ ಆಯುಕ್ತರು ಕೊಡಗು ಜಿಲ್ಲಾಧಿಕಾರಿಗಳಿಗೆ ಕಾಳಿದೇವನ ಹೊಸೂರು (ಹುದುಗೂರು) ಗ್ರಾಮದ ವರದಿಯನ್ನು ನೀಡುವಂತೆ ಪತ್ರವನ್ನು ನೀಡಿರುತ್ತಾರೆ ಎಂದು ತಿಳಿದುಬಂದಿದೆ.