ಮಡಿಕೇರಿ, ಡಿ. ೩೦: ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕಳೆಗಟ್ಟಿದೆ. ವರ್ಷಾಂತ್ಯದಲ್ಲಿ ದೇಶದ ವಿವಿಧ ಭಾಗಗಳಿಂದ ಕೊಡಗು ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಕ್ರಿಸ್‌ಮಸ್, ಹೊಸ ವರ್ಷ ನಡುವೆ ವಾರಾಂತ್ಯ ಇರುವುದರಿಂದ ಜಿಲ್ಲೆಯ ಹಲವೆಡೆ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ.

ತಾ. ೨೫ ರಿಂದ ಜನವರಿ ಮೊದಲ ವಾರದವರೆಗೆ ಬಹುತೇಕ ಸಾಫ್ಟ್ವೇರ್ ಕಂಪನಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಇದೆ.

ಹೊಸ ವರ್ಷ ಹಾಗೂ ತಮ್ಮ ರಜೆಯನ್ನು ‘ಎಂಜಾಯ್’ ಮಾಡಲು ಪ್ರವಾಸಿಗರು ಕೊಡಗು ಜಿಲ್ಲೆಗೆ ಬರುತ್ತಿದ್ದು, ಇಲ್ಲಿನ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳುವುದರೊAದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಮಡಿಕೇರಿಯ ರಾಜಾಸೀಟ್, ಅಬ್ಬಿಫಾಲ್ಸ್, ಕುಶಾಲನಗರದ ನಿಸರ್ಗಧಾಮ, ದುಬಾರೆ ಸಾಕಾನೆ ಶಿಬಿರಗಳು ಪ್ರವಾಸಿಗರಿಂದ ತುಂಬಿವೆ.

ಅಲ್ಲದೇ ಕುಶಾಲನಗರ-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಪ್ರವಾಸಿಗರ ವಾಹನಗಳ ಸಂಖ್ಯೆಯಿAದ ಟ್ರಾಫಿಕ್ ಜಾಮ್ ಕೂಡ ಕಂಡುಬರುತ್ತಿದೆ.

ಸಾಲು ಸಾಲು ರಜೆ ಹಿನ್ನೆಲೆ ಜಿಲ್ಲೆಯ ಬಹುತೇಕ ಹೋಮ್ ಸ್ಟೇ ಹಾಗೂ ರೆಸಾರ್ಟ್ಗಳು ಫುಲ್ ಆಗಿವೆ. ಪ್ರವಾಸಿಗರು ಮುಂಗಡವಾಗಿ ಐಷಾರಾಮಿ ಹೋಮ್ ಸ್ಟೇ ಹಾಗೂ ರೆಸಾರ್ಟ್ಗಳನ್ನು ಬುಕ್ ಮಾಡಿದ್ದಾರೆ.

ಐಷಾರಾಮಿ ಹೋಮ್ ಸ್ಟೇಗಳು ಜನವರಿ ಹತ್ತರವರೆಗೆ ಭರ್ತಿಯಾಗಿರುವುದರಿಂದ ಸಣ್ಣಪುಟ್ಟ ಹೋಮ್ ಸ್ಟೇ ಹಾಗೂ ಲಾಡ್ಜ್ಗಳಿಗೆ ಇದೀಗ ಜಿಲ್ಲೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಜಿಲ್ಲೆಯ ಹೋಮ್ ಸ್ಟೇ ಉದ್ಯಮಕ್ಕೆ ನ್ಯೂಯರ್ ಹೊಸ ಟಾನಿಕ್ ನೀಡಿದಂತಾಗಿದೆ.

ಜೀವ ತುಂಬಿದ ನ್ಯೂಯರ್!.

ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ನಂಬಿ ಬದುಕುವ ಲಕ್ಷಾಂತರ ಮಂದಿ ಇದ್ದಾರೆ. ಆದರೆ ೨೦೧೮ ಹಾಗೂ ೨೦೧೯ ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ನಂತರ ೨೦೨೦ ಹಾಗೂ ೨೦೨೧ ರಲ್ಲಿ ಕೋವಿಡ್ ಹೊಡೆತಕ್ಕೆ ಸಿಲುಕಿ ಕೊಡಗಿನ ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲಕಚ್ಚಿತ್ತು. ಜಿಲ್ಲೆಯ ಪ್ರವಾಸೋದ್ಯಮಕ್ಕೆ ದಸರಾ ಆಚರಣೆ ಕೊಂಚ ಜೀವ ತುಂಬಿತ್ತು.

ಇದೀಗ ನ್ಯೂಯರ್ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಪ್ರವಾಸೋದ್ಯಮವನ್ನು ನಂಬಿ ಬದುಕುತ್ತಿರುವವರು ಹೊಸ ನಿರೀಕ್ಷೆಯಲ್ಲಿ ಇದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಐಸಿಯುನಲ್ಲಿದ್ದ ಕೊಡಗಿನ ಪ್ರವಾಸೋದ್ಯಮಕ್ಕೆ ನ್ಯೂಯರ್ ಆಚರಣೆ ಮರುಜೀವ ತುಂಬಿದೆ.

ಇದರೊಂದಿಗೆ ಕೋವಿಡ್ ಪ್ರಕರಣಗಳು ದೇಶದಲ್ಲಿ ಕಂಡುಬರುತ್ತಿರುವ ಹಿನ್ನೆಲೆ ಕೆಲವೊಂದು ಬಿಗಿ ನಿಯಮದಿಂದ ಸಂಭ್ರಮಕ್ಕೆ ಬಿಸಿ ತಟ್ಟುತ್ತ ಎನ್ನುವ ಭಯವೂ ಪ್ರವಾಸೋದ್ಯಮವನ್ನು ನಂಬಿ ಬದುಕುತ್ತಿರುವರನ್ನು ಕಾಡುತ್ತಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ