ಕಡಂಗ, ಡಿ. ೩೦: ಕಬಡಕೇರಿ ವಿಶ್ವಶಾಂತಿ ಬಳಗದ ವತಿಯಿಂದ ೧೫ನೇ ವರ್ಷದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಆರ್.ವೈ.ಸಿ. ಚಾಂಪಿಯನ್ ಆಗಿ ಹೊರಹೊಮ್ಮಿದೆ, ಸಿರಾಜ್ ಫ್ರೆಂಡ್ಸ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಕ್ರೀಡೆಯಿಂದ ಸ್ನೇಹ ಸೌಹಾರ್ದತೆ ಹೆಚ್ಚಾಗುತ್ತದೆ. ಜಾತಿ ಆಧಾರದಲ್ಲಿ ನಡೆಯುವ ಕ್ರೀಡೆಗಳಿಗಿಂತ ಎಲ್ಲಾ ವರ್ಗದವರನ್ನು ಸೇರಿಸಿ ಕ್ರೀಡೆಗಳು ನಡೆಸುವುದು ಈ ಸಮಾಜಕ್ಕೆ ಉತ್ತಮ ಎಂದು ಅಭಿಪ್ರಾಯಿಸಿದರು. ಮೊದಲು ಸೆಮಿಫೈನಲ್ ಪಂದ್ಯಾಟದಲ್ಲಿ ಆರ್ವೈಸಿ ತಂಡ ಡೆಕ್ಕನ್ ನಾಪೋಕ್ಲು ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್ ಪಂದ್ಯಾಟದಲ್ಲಿ ಸಿರಾಜ್ ಫ್ರೆಂಡ್ಸ್ ತಂಡ ಹೊದವಾಡ ತಂಡವನ್ನು ಮಣಿಸಿ, ಫೈನಲ್ ಪ್ರವೇಶಿಸಿತು.
ಸಂಘದ ಅಧ್ಯಕ್ಷ ಚೆಟ್ಟಿಮಾಡ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್, ಪ್ರಮುಖರಾದ ಸುಂಟಿಕೊಪ್ಪದ, ಇಸ್ಮಾಯಿಲ್ ನಾಪೋಕ್ಲು ಮೈದು, ಕೊಟ್ಟಮುಡಿ, ಜಾಸೀರ್, ಬಲ್ಲಚಂಡ ಗೌತಮ್, ಸುನಿಲ್, ಮಂಜು ಕೂಡಿಗೆ, ಪತ್ರಕರ್ತ ನೌಫಲ್, ಸಂಘದ ಸದಸ್ಯರಾದ ಯುನಸ್, ವಿಶ್ವನಾಥ್, ಆಚು, ಆಶಿಮ್, ಫೇರುಜ್, ಆಶಿಫ್ ಉಪಸ್ಥಿತರಿದ್ದರು.
ಕಬಡಕೇರಿ ಯುವಕ ಸಂಘದ ಸದಸ್ಯರು ನಿವೃತ್ತ ಶಿಕ್ಷಕ ಚೌರಿರ ಉದಯ ಅವರನ್ನು ನೆನಪಿನ ಕಾಣಿಕೆ ನೀಡಿ ಸಂಘದ ವತಿಯಿಂದ ಗೌರವಿಸಲಾಯಿತು. ಸ್ವಾಗತ ಮತ್ತು ವಂದನಾರ್ಪಣೆಯನ್ನು ಸಂಘದ ಸದಸ್ಯ ಉಮ್ಮರ್ ನಿರ್ವಹಿಸಿದರು.