ಕುಶಾಲನಗರ, ಡಿ. ೩೦: ನೌಕರಿಯಿಂದ ನಿವೃತ್ತರಾದವರು ಮತ್ತು ಹಿರಿಯ ನಾಗರಿಕರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಚಟುವಟಿಕೆಯಿಂದ ಇದ್ದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಪ್ರೋಬಸ್ ಕ್ಲಬ್ನ ನಿರ್ಗಮಿತ ಅಧ್ಯಕ್ಷ ಕೆ.ಎಸ್. ತಿಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರದ ಪ್ರೋಬಸ್ ಕ್ಲಬ್ನ ೨೦೨೩ -೨೦೨೪ ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಹಿರಿಯ ನಾಗರಿಕರು ಅವಕಾಶ ಮತ್ತು ಸಮಯದ ಸದ್ಬಳಕೆ ಮಾಡಿಕೊಳ್ಳಲು ಕರೆ ನೀಡಿದರು. ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಇರುವ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಪರಿಹಾರವಾಗಲು ಸಾಧ್ಯ ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಉಲ್ಲಾಸ್ ಕೃಷ್ಣನ್ ಪದಗ್ರಹಣ ಅಧಿಕಾರಿಯಾಗಿ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭ ಮಾತನಾಡಿದ ಅವರು, ನಿವೃತ್ತ ಜೀವನ ಎನ್ನುವ ಬದಲು ಸಂತೋಷದ ಜೀವನ ಎನ್ನುವುದು ಸೂಕ್ತ. ಕುಟುಂಬದ ಎಲ್ಲಾ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿ, ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಯಶಸ್ಸು ತಮ್ಮದಾಗಿದೆ ಎಂದು ಪ್ರೋತ್ಸಾಹದ ಮಾತುಗಳಾಡಿದರು. ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಬೋಸ್ ಮೊಣ್ಣಪ್ಪ, ಉಪಾಧ್ಯಕ್ಷರಾಗಿ ಎ.ಎನ್. ದೇವಯ್ಯ, ಕಾರ್ಯದರ್ಶಿಯಾಗಿ ಜಿ. ಕೆಂಚಪ್ಪ, ಖಜಾಂಚಿಯಾಗಿ ಎಸ್.ಎಸ್. ನಾಗರಾಜ್, ಪಿಆರ್ಓ ಆಗಿ ಸಿ.ಡಿ. ಮಂದಪ್ಪ ಅಧಿಕಾರ ಸ್ವೀಕರಿಸಿದರು.
ರೋಟರಿ ಕ್ಲಬ್ನ ಕಾರ್ಯದರ್ಶಿ ಶಿಬು ತೋಮಸ್, ಪ್ರೋಬಸ್ ಕ್ಲಬ್ನ ನಿರ್ಗಮಿತ ಕಾರ್ಯದರ್ಶಿ ಡಾ. ಹೆಚ್.ಎಸ್. ರಾಜಶೇಖರ್, ನಿರ್ಗಮಿತ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಎಂ.ಡಿ. ರಂಗಸ್ವಾಮಿ, ಸಿ.ಎಂ. ತಿಮ್ಮಯ್ಯ, ಪ್ರಕಾಶ್, ಡ್ಯಾನಿಯಲ್ ಮತ್ತಿತರರು ಇದ್ದರು.