ಸೋಮವಾರಪೇಟೆ, ಡಿ. ೩೦ : ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವುದೇ ರೈತರಿಗೆ ಸರ್ಕಾರದ ಪರಿಹಾರ ಲಭ್ಯವಾಗಿಲ್ಲ. ಅಧಿಕಾರಿಗಳನ್ನು ಪ್ರಶ್ನಿಸಿದರೆ ಇಲ್ಲಸಲ್ಲದ ಸಬೂಬು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಗರ್ವಾಲೆ ವ್ಯಾಪ್ತಿಯ ಗ್ರಾಮಾಧ್ಯಕ್ಷರುಗಳು, ತಕ್ಷಣ ಪರಿಹಾರ ಹಣ ಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಗರ್ವಾಲೆ ಗ್ರಾಮಾಧ್ಯಕ್ಷ ತಂಬುಕುತ್ತಿರ ಆರ್. ಬಸಪ್ಪ ಅವರು, ಪ್ರಸಕ್ತ ಸಾಲಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಗರ್ವಾಲೆ, ಶಿರಂಗಳ್ಳಿ, ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ, ಕಿರುದಾಲೆ, ಮಂಕ್ಯ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಫಸಲು ನಷ್ಟವಾಗಿದ್ದು, ಕಾಫಿ ಸಂಪೂರ್ಣ ನೆಲಕ್ಕಚ್ಚಿದೆ. ಆದರೆ ಯಾವೊಬ್ಬ ರೈತನಿಗೂ ಈವರೆಗೆ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗಿಲ್ಲ ಎಂದು ದೂರಿದರು.

ಕಾಫಿಯೊಂದಿಗೆ ಭತ್ತ, ಕರಿಮೆಣಸು ಬೆಳೆಗಳೂ ಹಾನಿಗೀಡಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದೇವೆ. ಪರಿಹಾರ ಹಣ ಬಾರದಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಒಂದೆರಡು ದಿನದಲ್ಲಿ ಹಣ ಜಮೆಯಾಗುತ್ತದೆ ಎಂದು ಕಳೆದ ೧೦ ದಿನಗಳಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಪರಿಹಾರ ಮಾತ್ರ ಬಂದಿಲ್ಲ ಎಂದು ಆರೋಪಿಸಿದರು.

ಇದರೊಂದಿಗೆ ಗರ್ವಾಲೆ ಗ್ರಾಮ ಪಂಚಾಯಿತಿಯು ಈ ಹಿಂದೆ ಸುಂಟಿಕೊಪ್ಪ ಹೋಬಳಿಗೆ ಸೇರಿತ್ತು. ಇದೀಗ ಸೋಮವಾರಪೇಟೆ ತಾಲೂಕಿಗೆ ಒಳಪಟ್ಟಿರುವುದರಿಂದ ಸಮಸ್ಯೆಯಾಗಿದೆ ಎಂದು ಕೆಲ ಅಧಿಕಾರಿಗಳು ಕಾರಣ ನೀಡುತ್ತಿದ್ದಾರೆ. ಆದರೆ ಸುಂಟಿಕೊಪ್ಪ ಹೋಬಳಿಯ ರೈತರಿಗೆ ಪರಿಹಾರ ಬಂದಿದೆ. ನಮ್ಮ ಗ್ರಾ.ಪಂ. ಸಮೀಪದ ಗ್ರಾಮ ಪಂಚಾಯಿತಿಗಳಾದ ಮಾದಾಪುರ, ಶಾಂತಳ್ಳಿಯ ರೈತರಿಗೆ ಪರಿಹಾರ ಲಭಿಸಿದೆ. ನಮಗೆ ಮಾತ್ರ ಸಿಕ್ಕಿಲ್ಲ. ಇದು ಅಧಿಕಾರಿಗಳ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾ. ೩೦ರಂದು (ಇಂದು) ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಯ ಬಗ್ಗೆ ಮನವಿ ಸಲ್ಲಿಸಲಾಗುವುದು. ಅದಾದ ಒಂದು ವಾರದೊಳಗೆ ಪರಿಹಾರ ಬಿಡುಗಡೆಯಾಗದಿದ್ದರೆ ಮಡಿಕೇರಿಯಲ್ಲಿ ಈ ಭಾಗದ ರೈತರು ಜಮಾವಣೆಗೊಂಡು ರಸ್ತೆ ತಡೆ ನಡೆಸಲಾಗುವುದು. ಸರ್ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.

ಗೋಷ್ಠಿಯಲ್ಲಿ ಶಿರಂಗಳ್ಳಿ ಗ್ರಾಮಾಧ್ಯಕ್ಷ ಉಡುವೆರ ತಮ್ಮಯ್ಯ, ಕಿರುದಾಲೆ ಗ್ರಾಮಾಧ್ಯಕ್ಷ ಉದಿನಾಡಂಡ ಗಣೇಶ್, ಗರ್ವಾಲೆ ಗ್ರಾಮ ಉಪಾಧ್ಯಕ್ಷ ಕನ್ನಿಕಂಡ ಸುಭಾಷ್, ಗೀಜಿಗಂಡ ಲೋಕೇಶ್ ಅವರುಗಳು ಉಪಸ್ಥಿತರಿದ್ದರು.