ಕೂಡಿಗೆ, ಡಿ. ೨೮: ರಾಜ್ಯದ ಪ್ರಮುಖ ಪ್ರವಾಸಿ ತಾಣ ಹಾರಂಗಿ ಜಲಾಶಯದ ಒಳಗಿರುವ ಸಂಗೀತ ಕಾರಂಜಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡು ನೆರೆದಿದ್ದ ಸಾವಿರಾರು ಪ್ರವಾಸಿಗರು ಪರಿತಪಿಸಿದ ಘಟನೆ ಮಂಗಳವಾರ ಸಂಜೆ ನಡೆಯಿತು. ರಜಾದಿನಗಳು ಸೇರಿದಂತೆ ಕ್ರಿಸ್ಮಸ್ ಹೊಸ ವರ್ಷದ ಸಂಭ್ರಮದಲ್ಲಿರುವ ರಾಜ್ಯ ಮತ್ತು ಅಂತರರಾಜ್ಯದ ಪ್ರವಾಸಿಗರು, ಕೊಡಗು ಜಿಲ್ಲೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.
ಅಂತೆಯೇ ಮಂಗಳವಾರ ಸಂಜೆ ಸಂಗೀತ ಕಾರಂಜಿ ವೀಕ್ಷಿಸಲು ಸಾವಿರಕ್ಕೂ ಅಧಿಕ ಮಂದಿ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ್ದರು. ಆದರೆ ಕಾರಂಜಿ ಚಾಲನೆ ಆಗಲು ಕೆಲ ನಿಮಿಷಗಳು ಬಾಕಿ ಇರುವಾಗ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಬಹಳ ಸಮಯ ಕಾದರೂ ಕೂಡ ವಿದ್ಯುತ್ ಬರದ ಕಾರಣ ಪ್ರವಾಸಿಗರು ಅವ್ಯವಸ್ಥೆ ಬಗ್ಗೆ ಅಸಮಾಧಾನಗೊಂಡು ಹಿಂತೆರಳಿದರು. ಸಂಗೀತ ಕಾರಂಜಿಗೆAದು ಪ್ರತ್ಯೇಕ ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ಈ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಂಗೀತ ಕಾರಂಜಿ ಪ್ರದೇಶದಿಂದ ಮುಖ್ಯದ್ವಾರಕ್ಕೆ ತೆರಳುವ ಮಾರ್ಗದಲ್ಲಿ ಕೂಡ ಬೆಳಕಿಲ್ಲದೆ ಪ್ರವಾಸಿಗರು ನಡೆದುಕೊಂಡು ಬರಲು ಅನಾನುಕೂಲ ಉಂಟಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಕಾರಣ ಕನಿಷ್ಟ ಜನರೇಟರ್ ವ್ಯವಸ್ಥೆ ಕೂಡ ಇಲ್ಲದಿರುವುದು ಪ್ರವಾಸಿಗರಿಗೆ ಅಸಮಾಧಾನ ಉಂಟುಮಾಡಿದೆ. ಕಾದು ಬಸವಳಿದ ಬಹಳಷ್ಟು ಮಂದಿ ವಾಪಾಸ್ ತೆರಳಿದ ಬಳಿಕ ಕರೆಂಟ್ ಬಂದ ಕಾರಣ ಬಾಕಿ ಉಳಿದಿದ್ದವರಿಗೆ ಕಾರಂಜಿ ಪ್ರದರ್ಶನ ನೀಡಲಾಯಿತು.
ಕಳೆದ ೪ ತಿಂಗಳಿAದ ಜನರೇಟರ್ ಖರೀದಿಗೆ ಪ್ರಸ್ತಾವನೆ ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದ್ದು, ಅದರ ಅನುಮೋದನೆ ದೊರೆತಿದೆ. ಸಂಗೀತ ಕಾರಂಜಿಗೆAದೇ ೨೫೦ ಕೆವಿ ಸಾಮರ್ಥ್ಯದ ಒಂದು ಜನರೇಟರ್ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು ಮುಂದಿನ ಒಂದು ತಿಂಗಳ ಒಳಗಾಗಿ ಜನರೇಟರ್ ಅಳವಡಿಕೆ ಮಾಡಲಾಗುವುದು ಎಂದು ಹಾರಂಗಿ ನೀರಾವರಿ ವಿಭಾಗದ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ