ವೀರಾಜಪೇಟೆ, ಡಿ. ೨೯: ಗ್ರಾಮ ಪಂಚಾಯಿತಿ ಚುನಾವಣೆ ನಡೆದು ಎರಡೂವರೆ ವರ್ಷಗಳೇ ಕಳೆದರೂ ಕೇವಲ ಒಂದೇ ಒಂದು ಗ್ರಾಮ ಸಭೆಗೆ ಕಾಕೋಟುಪರಂಬು ಪಂಚಾಯಿತಿ ಸೀಮಿತಗೊಂಡಿರುವುದು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಾಕೋಟುಪರಂಬು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗು ಕಾಕೋಟುಪರಂಬು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ಆಪಾದಿಸಿದ್ದಾರೆ.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಂಚಾಯತ್ ರಾಜ್ ನಿಯಮದ ಪ್ರಕಾರ ವರ್ಷಕ್ಕೆ ೨ ಬಾರಿ ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳನ್ನು ನಡೆಸಬೇಕು. ಗ್ರಾಮ ಸಭೆಗಳನ್ನು ನಡೆಸಿದರೆ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗಿಯಾಗಿ ಗ್ರಾಮಸ್ಥರ ಬೇಡಿಕೆಗಳು ಮತ್ತು ಕುಂದುಕೊರತೆ ಹಾಗು ಅಭಿವೃದ್ದಿಯ ನಡೆಸುವ ಬಗ್ಗೆ ಚರ್ಚಿಸಬಹುದು. ಇದ್ಯಾವುದಕ್ಕೂ ಪಂಚಾಯಿತಿ ಅಧ್ಯಕ್ಷರು ಅವಕಾಶ ನೀಡುತ್ತಿಲ್ಲ. ಪಂಚಾಯತಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಕುಂದು ಕೊರೆತೆಗಳ ಬಗ್ಗೆ ದೂರು ನೀಡಲು ತೆರಳಿದರೆ ಉಡಾಫೆಯ ಉತ್ತರ ದೊರೆಯುತ್ತಿದೆ. ಭ್ರಷ್ಟಾಚಾರ ಬಯಲಿಗೆ ಬರುತ್ತದೆ ಎಂಬ ಕಾರಣಕ್ಕಾಗಿ ಗ್ರಾಮ ಹಾಗೂ ವಾರ್ಡ್ ಸಭೆಗಳನ್ನು ನಡೆಸುತ್ತಿಲ್ಲ. ಮುಂದಿನ ೨ ತಿಂಗಳಲ್ಲಿ ಚುನಾವಣೆ ಘೋಷಣೆ ಆಗಿ ನೀತಿ ಸಂಹಿತೆ ಜಾರಿಯಾದರೆ ಸದ್ಯಕ್ಕೆ ಯಾವುದೇ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಮುಂದಿನ ೧೫ ದಿನಗಳಲ್ಲಿ ವಾರ್ಡ್ ಸಭೆ ನಡೆಸದಿದ್ದರೆ ಗ್ರಾಮಸ್ಥರ ಸಹಕಾರದೊಂದಿಗೆ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ತೋರೆರ ಸುನೀಲ್ ಮಾತನಾಡಿ ಬೇತ್ರಿಯಿಂದ ಹೆಮ್ಮಾಡುವಿಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು ನಡೆದಾಡಲು ಕಷ್ಟವಾಗುತ್ತಿದೆ. ಹೆಮ್ಮಾಡು ಬಳಿ ೧.೪೦ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಂಪೂರ್ಣ ಕಳಪೆಯಾಗಿದ್ದು ತಡೆಗೋಡೆ ಕುಸಿದಿದೆ. ಹಲವಾರು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನ ಇಲ್ಲ ಎಂದು ದೂರಿದರು.
ಗ್ರಾಮಸ್ಥ ರವಿಚಂದ್ರ ಮಾತನಾಡಿ, ಕಾಕೋಟುಪರಂಬು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಲಾಗಿದ್ದರು ಕುಡಿಯಲು ನೀರಿಲ್ಲ. ಆಸರೆ ಹೊಸ ಮನೆ ಕಟ್ಟುತ್ತಿರುವವರಿಗೆ ಪಂಚಾಯಿತಿ ನೀರು ಲಭ್ಯವಾಗುತ್ತಿದೆ. ಹೋಗಿ ಕೇಳಿದರೆ ನಿಮ್ಮ ಕಡೆ ನೀರು ಬಿಟ್ಟಿದ್ದೇವೆ ಬೇರೆ ಯಾರೊ ಅವರ ಕಡೆ ತಿರುಗಿಸಿಕೊಂಡಿದ್ದಾರೆ. ನಾವೇನು ಮಾಡೋದು ಎಂಬ ಹಾರಿಕೆ ಉತ್ತರ ನೀಡುತ್ತಾರೆ ಇಂತಹ ಆಡಳಿತದಿಂದ ಯಾವ ರೀತಿ ಅಭಿವೃದ್ದಿ ಬಯಸಲು ಸಾಧ್ಯ ಎಂದು ಪ್ರಶ್ನಿಸಿದರು. ಗೋಷ್ಠಿಯಲ್ಲಿ ಮಂಡೇಟಿರ ಪೊನ್ನಪ್ಪ, ಪ್ರಕಾಶ್ ರೈ ಉಪಸ್ಥಿತರಿದ್ದರು.