ಕಣಿವೆ, ಡಿ. ೨೯: ಕುಶಾಲನಗರ ತಾಲೂಕು ಕೇಂದ್ರದಲ್ಲಿನ ಕಲಾಭವನ ಕಟ್ಟಡ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಆಡಳಿತಾರೂಢ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ಇಲ್ಲಿನ ಕಲಾ ಪೋಷಕರು, ಸಾಹಿತಿಗಳು ಹಾಗೂ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಹದಿನೈದು ವರ್ಷಗಳ ಹಿಂದೆ ಈ ಕಲಾಭವನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಕಾಮಗಾರಿಗೆ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಈಗಾಗಲೇ ರೂ. ೫ ಕೋಟಿ ಖರ್ಚು ಮಾಡಿದೆ. ಆದಾಗ್ಯೂ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ.
ಈ ಬಗ್ಗೆ ಕ್ಷೇತ್ರದ ಶಾಸಕರ ಗಮನಸೆಳೆಯಲಾಗಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಕೇಂದ್ರದಲ್ಲಿ ತಲೆ ಎತ್ತಬೇಕಿದ್ದ ಈ ಕಲಾಭವನ ಕಟ್ಟಡವನ್ನು ನಿರ್ಮಿಸಲು ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ ಸೂಕ್ತ ಸ್ಥಳಾವಕಾಶ ಲಭ್ಯವಾಗದ ಕಾರಣ ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯುತ್ತಿರುವ ಕುಶಾಲನಗರ ಪಟ್ಟಣದ ಕಾವೇರಿ ಬಡಾವಣೆಯಲ್ಲಿ ಈ ಭವನವನ್ನು ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿತ್ತು.
ಆದರೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಪೂರಕ ಅನುದಾನದ ದೊರಕದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ.
ಲಸಿಕಾ ಕೇಂದ್ರವಾದ ಕಟ್ಟಡ
ಸೂಕ್ತ ಸಮಯದಲ್ಲಿ ಸಿದ್ಧಗೊಂಡು ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗುವ ಮೂಲಕ ಅವರಲ್ಲಿ ಸುಪ್ತವಾಗಿದ್ದ ಪ್ರತಿಭೆಗಳನ್ನು ಅರಳಿಸಬೇಕಿದ್ದ ಕಲಾಭವನ ಕಟ್ಟಡ ಕಳೆದ ಎರಡು ವರ್ಷಗಳಲ್ಲಿ ಮಾರಕ ಕೊರೊನಾ ಓಡಿಸುವ ಲಸಿಕಾ ಕೇಂದ್ರವಾಗಿ ಮಾರ್ಪಟ್ಟಿತ್ತು.
ಬೇಕಿದೆ ಸೂಕ್ತ ಅನುದಾನ
ಈ ಕಲಾಭವನದ ಅಪೂರ್ಣಗೊಂಡ ಕಾಮಗಾರಿಗೆ ಪೂರಕವಾದ ಅನುದಾನವನ್ನು ತಂದು ಶಾಸಕರು ಇದನ್ನು ಪೂರ್ಣಗೊಳಿಸುವತ್ತ ಚಿಂತನೆ ಮಾಡಬೇಕಿದೆ. ಆ ಮೂಲಕ ಕುಶಾಲನಗರ ಭಾಗದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಪ್ರತಿಭೆಗಳ ಬೆಳಗಿಸುವ ಆಲಯವಾಗಿ ಮಾರ್ಪಡಿಸಬೇಕಿದೆ ಎನ್ನುವುದು ಕುಶಾಲನಗರದ ನಾಗರಿಕರ ಆಗ್ರಹವಾಗಿದೆ.
- ಕೆ.ಎಸ್. ಮೂರ್ತಿ