*ಗೋಣಿಕೊಪ್ಪ, ಡಿ. ೨೮: ವಾಣಿಜ್ಯ ನಗರಿ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ೬ನೇ ವಿಭಾಗದ ಸದಸ್ಯೆ ಮನ್ನಕಮನೆ ಸೌಮ್ಯ ಬಾಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸದಸ್ಯರ ವಿಶ್ವಾಸದ ಬಲದೊಂದಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದು, ಮುಂದಿನ ಗ್ರಾ.ಪಂ. ಆಡಳಿತದ ೧೩ ತಿಂಗಳ ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಈ ಹಿಂದೆ ಹದಿನೈದು ತಿಂಗಳು ಅಧ್ಯಕ್ಷರಾಗಿ ಆಡಳಿತ ನಡೆಸಿದ್ದ ಚೈತ್ರ ಬಿ. ಚೇತನ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಚುನಾವಣಾಧಿಕಾರಿಯಾಗಿ ಮತ್ತು ಸಹಾಯಕ ಅಧಿಕಾರಿಯಾಗಿ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಶ್ ಚುನಾವಣೆ ಪ್ರಕ್ರಿಯೆ ನಡೆಸಿದರು. ಅಧ್ಯಕ್ಷ ಸ್ಥಾನಕ್ಕೆ ಬೇರೆ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸದೇ ಇದ್ದುದರಿಂದ ನಾಮಪತ್ರ ಸಲ್ಲಿಸಿದ್ದ ಸೌಮ್ಯ ಬಾಲು ಅವರ ಆಯ್ಕೆ ಅವಿರೋಧವಾಗಿ ನಡೆಯಿತು.

ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಚೈತ್ರ ಬಿ. ಚೇತನ್, ಬಿ.ಎನ್. ಪ್ರಕಾಶ್, ರತಿ ಅಚ್ಚಪ್ಪ, ರಾಜೇಶ್.ಕೆ, ಪುಷ್ಪಾ ಮನೋಜ್, ವಿವೇಕ್ ರಾಯ್ಕರ್, ಜೆ.ಕೆ. ಗೀತಾ, ಕೊಣಿಯಂಡ ಬೋಜಮ್ಮ, ರಾಮ್‌ದಾಸ್, ಹಕೀಮ್, ರಾಮಕೃಷ್ಣ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್, ಹಾತೂರು ಗ್ರಾ.ಪಂ. ಅಧ್ಯಕ್ಷ ಗುಮ್ಮಟ್ಟೀರ ದರ್ಶನ್ ನಂಜಪ್ಪ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಗೋಣಿಕೊಪ್ಪ ನಗರ ಬಿಜೆಪಿ ಉಸ್ತುವಾರಿ ಕುಪ್ಪಂಡ ಗಿರಿ ಪೂವಣ್ಣ, ಶಕ್ತಿ ಕೇಂದ್ರ ಪ್ರಮುಖ್ ಸುರೇಶ್ ರೈ, ಸಹ ಪ್ರಮುಖ್ ನೂರೇರ ರಂಜಿ, ಗ್ರಾ.ಪಂ. ಮಾಜಿ ಸದಸ್ಯೆ ರೀನಾ ರಾಜೀವ್, ವಕ್ಫ್ ಸಮಿತಿ ಸದಸ್ಯ ಸಾಜಿ ಇದ್ದರು.