ವೀರಾಜಪೇಟೆ, ಡಿ. ೨೮: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವೀರಾಜಪೇಟೆ ಮಡಿಕೇರಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಆಸಕ್ತ ಮಹಿಳೆಯರಿಗೆ ಆಟೋ ಚಾಲನಾ ತರಬೇತಿ ಕಾರ್ಯಕ್ರಮ ವನ್ನು ಗ್ರಾಮಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಲೀಲಾವತಿ ಅವರು, ಬಡ ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಸ್ವ ಉದ್ಯೋಗವೇ ಇದಕ್ಕೆ ಮೂಲಾಧಾರ ಅನ್ನುವುದನ್ನು ಮನಗಂಡು ಜ್ಞಾನ ವಿಕಾಸ ಕೇಂದ್ರಗಳ ಮೂಲಕ ಗ್ರಾಮ ಗ್ರಾಮಗಳಲ್ಲಿ ಬಡ ಮಹಿಳೆಯರನ್ನು ಸಂಘಟಿಸಿ ಸಬಲತೆಯ ಸಾಕ್ಷಾತ್ಕಾರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳುವ ಯೋಜನೆಯ ಕಾರ್ಯಕ್ರಮಗಳಲ್ಲಿ ಸೃಜನಶೀಲ ಕಾರ್ಯಕ್ರಮವೂ ಒಂದಾಗಿದೆ. ಇಂದು ಆಸಕ್ತ ಮಹಿಳೆಯರಿಗೆ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಂಡಲ್ಲಿ ಸಮಾಜದಲ್ಲಿ ಒಂದು ಮಾದರಿ ಕುಟುಂಬವಾಗಿ ಗುರುತಿಸಿಕೊಂಡು ಬೆಳೆಯುವುದರಲ್ಲಿ ಸಂಶಯ ಇಲ್ಲ ಎಂದರು.

ವೀರಾಜಪೇಟೆ ಆರಕ್ಷಕ ಠಾಣೆಯ ಮಾದಯ್ಯ, ಠಾಣಾ ಸಿಬ್ಬಂದಿ ಗೀತಾ ದಿನ ನಿತ್ಯದ ಜೀವನದಲ್ಲಿ ನೀತಿ ನಿಯಮ ಪಾಲಿಸುವುದು ಅಗತ್ಯವಾಗಿದೆ ಎಂದರು. ಜಿಲ್ಲಾ ಜಾಗೃತಿ ವೇದಿಕೆ ಸದಸ್ಯರಾದ ಬಾನಂಗಡ ಅರುಣ್ ಕುಮಾರ್ ಮಾತನಾಡಿ ಇಂದು ಮಹಿಳೆಯರು ಅಬಲೆ ಅನ್ನುವ ಪಟ್ಟವನ್ನು ತೊಡೆದು ಹಾಕಿ ಸಬಲತೆಯ ಮಾರ್ಗ ಹಿಡಿದು ಪ್ರತಿಯೊಂದು ಕ್ಷೇತ್ರಗಳಲ್ಲೂ ವಿಶೇಷವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಪೂಜ್ಯರು ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹ ನೀಡುತ್ತಿದ್ದಾರೆ. ನಾವೆಲ್ಲರೂ ಈ ಯೋಜನೆಗೆ ಸದಾ ಕಾಲ ಪ್ರೋತ್ಸಾಹ ನೀಡುತ್ತೇವೆ ಎಂದರು.

ತಾಲೂಕಿನ ಯೋಜನಾಧಿಕಾರಿ ದಿನೇಶ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆಟೋ ಚಾಲನಾ ತರಬೇತುದಾರರಾದ ಮೀನಾ ವಾಹನ ಚಾಲನಾ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆಯ್ಕೆಗೊಂಡ ಸದಸ್ಯರು ಮಹಾಲಕ್ಷಿ÷್ಮ ಹಾಗೂ ಕನಸು ಕೇಂದ್ರ ಸದಸ್ಯರುಗಳು ಒಕ್ಕೂಟ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೇಯಾ ಕಾರ್ಯಕ್ರಮವನ್ನು ನಿರೂಪಿಸಿ, ಸೇವಾ ಪ್ರತಿನಿಧಿ ಪದ್ಮಲತಾ ಸ್ವಾಗತಿಸಿ, ಮಹಾಲಕ್ಷಿ÷್ಮ ಜೆವಿಕೆ ಸದಸ್ಯರಾದ ಅಂಬಿಕಾ ವಂದಿಸಿದರು.