ಕಣಿವೆ, ಡಿ. ೨೬: ಕುಶಾಲನಗರ ತಾಲೂಕಿನ ಹಾರಂಗಿ ಅಚ್ಚುಕಟ್ಟು ಪ್ರದೇಶದ ಕೃಷಿಕರು ಬೆಳೆದಿರುವ ಭತ್ತದ ಫಸಲು ಇದೀಗ ಕಟಾವಿಗೆ ಬಂದಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವ ಹವಾಮಾನ ವೈಪರೀತ್ಯ ರೈತರಿಗೆ ಒಂದು ರೀತಿ ಒಂದರ ಮೇಲೊಂದು ಫಜೀತಿ ಉಂಟು ಮಾಡಿದೆ.
ಈಗಾಗಲೇ ಕಟಾವಿಗೆ ಅಣಿಯಾಗಿರುವ ಭತ್ತದ ಫಸಲನ್ನು ಕೊಯ್ಲು ಮಾಡಿ ಕಂತೆ ಕಟ್ಟಿ ಗುಡ್ಡೆಗಳಾಗಿ ನಿರ್ಮಿಸುವಷ್ಟರಲ್ಲಿ ಆಗಸದಲ್ಲಿ ಮೋಡ ಮುಸುಕಿದ ಮಳೆಯ ಭೀತಿ ಆತಂಕವನ್ನು ಉಂಟು ಮಾಡಿದೆ. ವರ್ಷವಿಡೀ ಕಷ್ಟಪಟ್ಟು ಊಟಕ್ಕೆ ಬೆಳೆದಂತಹ ಅನ್ನದ ಆಹಾರ ವಾದ ಭತ್ತದ ಧಾನ್ಯಲಕ್ಷಿö್ಮಯನ್ನು ಕಟಾವು ಮಾಡಿ ಅತ್ಯಂತ ಪ್ರೀತಿಯಿಂದ ಮನೆತುಂಬಿಸಿಕೊಳ್ಳಬೇಕಾದ ಕೃಷಿಕರಿಗೆ ಭೀತಿಯನ್ನುಂಟು ಮಾಡಿದೆ.
ಕುಶಾಲನಗರ ತಾಲೂಕಿನ ಗಡಿ ಗ್ರಾಮ ಶಿರಂಗಾಲದ ಭತ್ತದ ಗದ್ದೆಯೊಂದರಲ್ಲಿ ವಯೋವೃದ್ಧ ಕೃಷಿಕರಾದ ದೇವರಾಜು ಹಾಗೂ ಸಣ್ಣತಾಯಮ್ಮ ದಂಪತಿ ಮೋಡದ ಭೀತಿಯಿಂದ ಅಕಾಲಿಕ ಮಳೆ ಸುರಿದು ಕಟಾವು ಮಾಡಿದ ಭತ್ತದ ಫಸಲಿಗೆ ಹಾನಿಯಾಗಬಾರದು ಎಂಬ ಕಾರಣಕ್ಕೆ ಭತ್ತದ ಧಾನ್ಯ ತುಂಬಿದ ಹುಲ್ಲನ್ನು ಒಟ್ಟುತ್ತಿದ್ದ ಚಿತ್ರಣ ಕಂಡು ಬಂತು.
ಈ ಬಗ್ಗೆ ‘ಶಕ್ತಿ'ಯೊಂದಿಗೆ ಪ್ರತಿಕ್ರಿಯಿಸಿದ ಕೃಷಿಕ ದೇವರಾಜು, ಈಗ ಹವಾಮಾನ ಆಗಿಂದಾಗ್ಗೆ ಬದಲಾಗುತ್ತಿದೆ. ಯಾವಾಗ ಮಳೆ ಸುರಿಯುತ್ತೆ, ಯಾವಾಗ ಹೊಳೆ ತುಂಬುತ್ತೆ, ಎಲ್ಲಿ ಯಾರದ್ದು ಬೆಳೆ ಕೊಚ್ಚಿ ಹೋಗುತ್ತೋ ಎಂಬ ಭಯ ಭೀತಿಯ ವಾತಾವರಣ ಕೃಷಿಕರಿಗೆ ತಲೆ ನೋವು ತಂದಿದೆ ಎಂದರು.
ಅತ್ತ ಭತ್ತದ ಕೊಯ್ಲು ಮುಗಿಸಿ ಮನೆಗೆ ಹೋದರೆ, ಇತ್ತ ಅಕಾಲಿಕ ಮಳೆ ಸುರಿದು ಎಲ್ಲಿ ಭತ್ತದ ಫಸಲು ಹಾನಿಯಾಗಿ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎನ್ನುವ ಹಾಗಾಗಬಾರದು ನೋಡಿ, ಅದಕ್ಕೆ ನಾವಿಬ್ಬರೇ ಗುಡ್ಡೆ ಮಾಡುತ್ತಿದ್ದೇವೆ ಎಂದರು.