ಭಾಗಮಂಡಲ, ಡಿ. ೨೬: ಚೇರಂಬಾಣೆ ಗೌಡ ಸಮಾಜ ಮತ್ತು ಕೊಡಗು ಗೌಡ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಚೇರಂಬಾಣೆಯಲ್ಲಿ ಕೊಡಗು ಗೌಡ ಜನಾಂಗದ ಗ್ರಾಮ ಗ್ರಾಮಗಳ ನಡುವಿನ ಕ್ರಿಕೆಟ್ ಪಂದ್ಯಾಟದ ಸೋಮವಾರದ ಪಂದ್ಯಗಳಲ್ಲಿ ಬಿಳಿಗೇರಿ ತಂಡವು ಕ್ವಾರ್ಟರ್ ಫೈನಲ್ ಹಂತ ತಲುಪಿತು.

ಇಂದಿನ ದಿನ ಮೊದಲ ಪಂದ್ಯ ಕಾಂತೂರಿನ ಐಕಾನಿಕ್ ಬ್ರದರ್ಸ್ ಮತ್ತು ಕ್ರೇಜಿ ಅವಂದೂರ್ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ಕಾಂತೂರು ಐಕಾನಿಕ್ ತಂಡವು ೮ ಓವರ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ ೧೧೩ ರನ್ ಗಳಿಸಿತು. ಕ್ರೇಜಿ ಅವಂದೂರ್ ತಂಡ ಎರಡು ವಿಕೆಟ್ ಕಳೆದುಕೊಂಡು ೧೧೪ ರನ್ ಗಳಿಸುವುದರ ಮೂಲಕ ಮುಂದಿನ ಸುತ್ತು ಪ್ರವೇಶಿಸಿತು ಎರಡನೇ ಪಂದ್ಯದಲ್ಲಿ ಮುತ್ತಾರ್ಮುಡಿ ಮಾಸ್ಟರ್ಸ್ ತಂಡವು ಕೊಟ್ಟೂರು ಬ್ಲಾಸ್ರ‍್ಸ್ ತಂಡದ ವಿರುದ್ಧ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಮುತಾರ್ಮುಡಿ ತಂಡವು ೮ ಓವರ್‌ನಲ್ಲಿ ಐದು ವಿಕೆಟ್ ನಷ್ಟಕ್ಕೆ ೯೦ ರನ್ ಗಳಿಸಿದರೆ ನಂತರ ಆಟವಾಡಿದ ಕೊಟ್ಟೂರು ಬ್ಲಾಸ್ರ‍್ಸ್ ತಂಡವು ಆರು ವಿಕೆಟ್ ನಷ್ಟಕ್ಕೆ ೫೯ ರನ್ ಗಳಿಸಿ ೩೧ ರನ್‌ಗಳ ಸೋಲನ್ನು ಅನುಭವಿಸಿತು.

ದಿನದ ಮೂರನೇ ಪಂದ್ಯದಲ್ಲಿ ಮಕ್ಕಂದೂರು ತಂಡವು ೮ ಓವರ್‌ನಲ್ಲಿ ಆರು ವಿಕೆಟ್ ನಷ್ಟಕ್ಕೆ ೩೮ ರನ್ ಗಳಿಸಿತು. ಉತ್ತರವಾಗಿ ಆಡಿದ ಟೀಂ ಯಡವಾರೆ ತಂಡವು ಒಂದು ವಿಕೆಟ್ ಕಳೆದುಕೊಂಡು ೩೯ ರನ್ ಗಳಿಸಿ ಜಯ ಸಾಧಿಸಿತು. ನಂತರದ ಪಂದ್ಯದಲ್ಲಿ ಟೀಂ ಯಡವಾರೆ ತಂಡವು ೮ ಓವರ್‌ನಲ್ಲಿ ಐದು ವಿಕೆಟ್ ನಷ್ಟಕ್ಕೆ ೮೧ ರನ್ ಗಳಿಸಿದರೆ, ಬಿಳಿಗೇರಿ ತಂಡವು ಏಳು ಓವರ್‌ನಲ್ಲಿ ಮೂರು ವಿಕೆಟ್ ನಷ್ಟಕ್ಕೆ ೮೨ ರನ್ ಗಳಿಸಿ ಮುಂದಿನ ಹಂತ ಪ್ರವೇಶಿಸಿತು.ಮತ್ತೊಂದು ಪಂದ್ಯದಲ್ಲಿ ಮುತ್ತಾರ್ಮುಡಿ ತಂಡವು ೮ ಓವರ್‌ನಲ್ಲಿ ಐದು ವಿಕೆಟ್ ನಷ್ಟಕ್ಕೆ ೯೨ ರನ್ ಗಳಿಸಿದರೆ, ಕ್ರೇಜಿ ಅವಂದೂರು ತಂಡವು ೭.೨ ಓವರ್‌ನಲ್ಲಿ ಎರಡು ವಿಕೆಟ್ ನಷ್ಟಕ್ಕೆ ೯೩ ರನ್ ಗಳಿಸಿ ಜಯ ಸಾಧಿಸಿತು. ನಂತರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ರೇಜಿ ಅವಂದೂರು ತಂಡ ಏಳು ವಿಕೆಟ್ ನಷ್ಟಕ್ಕೆ ೫೯ ರನ್ ಗಳಿಸಿತು. ಉತ್ತರವಾಗಿ ಆಡಿದ ಬಿಳಿಗೇರಿ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ ೬೨ ರನ್ ಗಳಿಸಿ ಜಯಸಾಧಿಸಿತು. ದಿನದ ಅಂತ್ಯದಲ್ಲಿ ಬಿಳಿಗೇರಿ ತಂಡವು ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿತು. -ಸುನಿಲ್