ಸೋಮವಾರಪೇಟೆ, ಡಿ. ೨೬: ಕಾಫಿ ಬೆಳೆಯುವ ರೈತರ ೧೦ ಎಚ್ಪಿವರೆಗಿನ ಕೃಷಿ ಪಂಪ್ಸೆಟ್ಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಹಾಗು ಉಚಿತ ವಿದ್ಯುತ್ ನೀಡಬೇಕು. ತಪ್ಪಿದ್ದಲ್ಲಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ. ದಿನೇಶ್ ಎಚ್ಚರಿಸಿದರು.
ಇಲ್ಲಿನ ಜೇಸೀ ವೇದಿಕೆಯಲ್ಲಿ ರೈತ ಸಂಘದ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ಚೌಧರಿ ಚರಣ್ಸಿಂಗ್ ಜನ್ಮದಿನಾಚರಣೆ ಹಾಗು ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಕ್ಕೆ ಕಾಫಿ ಉದ್ಯಮದಿಂದ ತೆರಿಗೆ ರೂಪದಲ್ಲಿ ಸಾವಿರಾರು ಕೋಟಿ ಆದಾಯ ಬರುತ್ತಿದೆ. ಆದರೆ ಕಾಫಿ ಉದ್ಯಮಕ್ಕೆ ಸರ್ಕಾರ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದೆ. ಈ ಕಾರಣದಿಂದ ಕಾಫಿ ತೋಟಗಳು ನಾಶವಾಗುತ್ತಿವೆ. ಉತ್ಪಾದನೆ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಫಿ ಬೆಳೆಯುವ ರೈತರ ೧೦ ಎಚ್.ಪಿ. ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಕಳೆದ ವರ್ಷದ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭರವಸೆ ನೀಡಿದ್ದರು. ಆದರೆ ಇದುವರೆಗೆ ಉಚಿತ ವಿದ್ಯುತ್ ನೀಡಿಲ್ಲ. ಬಡ್ಡಿ, ಚಕ್ರಬಡ್ಡಿ ಸೇರಿ ಬೆಳೆಗಾರರಿಗೆ ೫೦ ಸಾವಿರ ರೂ.ಗಳಿಂದ ಲಕ್ಷಗಳ ಲೆಕ್ಕದಲ್ಲಿ ಬಿಲ್ ಬರುತ್ತಿದೆ. ಅಕಾಲಿಕ ಮಳೆಯಿಂದ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ಪಂಪ್ಸೆಟ್ಗಳ ವಿದ್ಯುತ್ ಬಿಲ್ ಮನ್ನಾ ಮಾಡಿ, ಉಚಿತ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ಕಾಫಿ ಬೆಳೆಗಾರರ ಸಂಕಷ್ಟದ ಬಗ್ಗೆ ರಾಜ್ಯಸಭಾ ಸದಸ್ಯರಾದ ಚಿತ್ರನಟ ಜಗ್ಗೇಶ್ ಸಭೆಯಲ್ಲಿ ಮಾತನಾಡಿದ್ದಾರೆ. ಆದರೆ ಮಲೆನಾಡು ಭಾಗದ ಸಂಸದರು, ಶಾಸಕರಿಗೆ ಇಲ್ಲಿನ ಜನರ ಬಗ್ಗೆ ಕಾಳಜಿ ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಮಾತನಾಡಿ, ಕಾಫಿ ಬೆಳೆಗಾರರ ಉಚಿತ ವಿದ್ಯುತ್ ಬೇಡಿಕೆ ನಮ್ಮ ಹಕ್ಕು. ಬೆಳೆಗಾರರು ಭೀಕ್ಷೆ ಬೇಡುತ್ತಿಲ್ಲ. ಬೆಳೆಗಾರರು ತೆರಿಗೆ ಕಟ್ಟುತ್ತಿದ್ದಾರೆ. ತೆರಿಗೆಯ ಸಣ್ಣ ಪಾಲು ಕೇಳುತ್ತಿದ್ದೇವೆ. ವಾಣಿಜ್ಯ ಬೆಳೆಗಳಾದ ತೆಂಗು, ಅಡಕೆ, ಹೊಗೆಸೊಪ್ಪು, ಕಬ್ಬು ಬೆಳೆಯುವರಿಗೆ ಉಚಿತ ವಿದ್ಯುತ್ ನೀಡುವ ಸರ್ಕಾರ ಕಾಫಿ ಬೆಳೆಗಾರರಿಗೆ ಯಾಕೆ ಅನ್ಯಾಯ ಮಾಡುತ್ತಿದೆ ಎಂದು ಪ್ರಶ್ನಿಸಿದರು. ರೈತರ ಹೆಸರಿನಲ್ಲಿ ಪ್ರಮಾಣ ಮಾಡುವ ಜನಪ್ರತಿನಿಧಿಗಳು ರೈತರಿಗೆ ಒಳ್ಳೆ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ, ರೈತ ಮುಖಂಡರಾದ ಗರಗಂದೂರು ಲಕ್ಷö್ಮಣ, ಎಚ್.ಆರ್. ಲೋಕೇಶ್, ತಲ್ತಾರೆ ರಾಜಪ್ಪ, ಯಡೂರು ಕುಶಾಲಪ್ಪ, ಗಣಗೂರು ಚಂದ್ರಶೇಖರ್, ಮಾಜಿ ಸೈನಿಕ ಪ್ರಸನ್ನ, ರೇವಣ್ಣ, ಲಕ್ಕಯ್ಯ, ಚೇತನ್ ಸೇರಿದಂತೆ ಇತರರು ಭಾಗವಹಿಸಿದ್ದರು. ಈ ಸಂಬAಧಿತ ಬೇಡಿಕೆಯ ಮನವಿ ಪತ್ರವನ್ನು ತಾಲೂಕು ಕಚೇರಿಯ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.