ಕೂಡಿಗೆ, ಡಿ. ೨೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆ ಸಂಪೂರ್ಣವಾಗಿ ಭರ್ತಿಯಾದ ಸಂದರ್ಭ ಹೆಚ್ಚುವರಿಯಾಗಿ ನೀರನ್ನು ನದಿಗೆ ಹರಿಸುವಾಗ ಅಣೆಕಟ್ಟೆಯ ಮುಂಭಾಗದಲ್ಲಿರುವ ಸೇತುವೆಯು ಮುಳುಗಡೆಗೊಳ್ಳುವುದರಿಂದ ಸೋಮವಾರಪೇಟೆಗೆ ತೆರಳುವ ಸಂಪರ್ಕ ಕಡಿತಗೊಳ್ಳುತ್ತದೆ. ಅಲ್ಲದೆ ಯಡವನಾಡು ಸಂಪರ್ಕದ ೬ ಗ್ರಾಮಗಳ ಸಂಪರ್ಕವು ಕಡಿತಗೊಂಡು ಈ ವ್ಯಾಪ್ತಿಯ ಸಾರ್ವಜನಿಕರಿಗೆ, ರೈತರಿಗೆ ತೊಂದರೆಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ ನಾಯಕ್ ನೇತೃತ್ವದಲ್ಲಿ ಹಾರಂಗಿಗೆ ಭೇಟಿ ನೀಡಿದ ನೀರಾವರಿ ಸಚಿವರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮೂಲಕ ನೂತನ ಸೇತುವೆಗೆ ಮನವಿಯನ್ನು ಸಲ್ಲಿಸಿದರು.
ಅದರಂತೆ ಕಾವೇರಿ ನೀರಾವರಿ ನಿಗಮದ ನಿಯಮಾನುಸಾರ ಹಾರಂಗಿ ಅಣೆಕಟ್ಟೆಯ ವ್ಯಾಪ್ತಿಯ ಅಧಿಕಾರಿ ವರ್ಗದವರು ಈಗಾಗಲೇ ೨೫ ಕೋಟಿ ರೂ ವೆಚ್ಚದ ಸೇತುವೆಗೆ ಕ್ರಿಯಾ ಯೋಜನೆ ಪ್ರಸ್ತಾವನೆಯನ್ನು ರಾಜ್ಯಮಟ್ಟದ ನಿಗಮಕ್ಕೆ ಕಳುಹಿಸಿದ್ದಾರೆ. ಇದಕ್ಕೆ ಸಂಬAಧಿಸಿದAತೆ ಕಾಮಗಾರಿ ಕೈಗೊಳ್ಳುವ ಪ್ರಕ್ರಿಯೆಗಳು ರಾಜ್ಯ ಮಟ್ಟದಲ್ಲಿ ನಡೆಯುತ್ತಿವೆ.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಸದಸ್ಯ ಮಣಿಕಂಠ ಮತ್ತು ಈ ವ್ಯಾಪ್ತಿಯ ಗ್ರಾಮಸ್ಥರು ಹಾರಂಗಿಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಭೇಟಿ ಮಾಡಿ ಶೀಘ್ರವಾಗಿ ಕಾಮಗಾರಿಯ ಕ್ರಿಯಾ ಯೋಜನೆಗೆ ಸ್ಪಂದಿಸಿ ಇಲಾಖೆಯ ಮೂಲಕ ಹಣವನ್ನು ಬಿಡುಗಡೆಗೊಳಿಸಿ ಪೂರ್ಣಗೊಳಿಸಲು ಮನವಿ ಮಾಡಿದ್ದಾರೆ.