ಮಡಿಕೇರಿ, ಡಿ. ೨೬: ಕೊಡಗು ಜಿಲ್ಲಾ ದಿವ್ಯಾಂಗರ ಒಕ್ಕೂಟದ ಕಚೇರಿಗೆ ಒಕ್ಕೂಟದ ಮಾಜಿ ಅಧ್ಯಕ್ಷರು ಬೀಗ ಜಡಿದು ದಿವ್ಯಾಂಗರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಒಕ್ಕೂಟದ ಹಾಲಿ ಅಧ್ಯಕ್ಷರಾದ ಈಶ್ವರಿ ಅವರು ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ಇಂದು ಬೆಳಿಗ್ಗೆ ನಗರಸಭೆ ಆವರಣದಲ್ಲಿರುವ ದಿವ್ಯಾಂಗರ ಒಕ್ಕೂಟದ ಕಚೇರಿಗೆ ಒಕ್ಕೂಟದ ಹಾಲಿ ಅಧ್ಯಕ್ಷೆ ಈಶ್ವರಿ, ಪ್ರಧಾನ ಕಾರ್ಯದರ್ಶಿ ಲೋಹಿತ್ಗೌಡ, ನಿರ್ದೇಶಕಿ ಸೀತಮ್ಮ ಮತ್ತಿತರರು ಆಗಮಿಸಿದ ವೇಳೆ ಕಚೇರಿಯ ಬೀಗವನ್ನು ಬದಲಾಯಿಸಿರುವುದು ಕಂಡುಬAದಿದೆ. ಇದರಿಂದಾಗಿ ಬಂದಿದ್ದವರೆಲ್ಲರೂ ಕಚೇರಿಯ ಹೊರಭಾಗದಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಿ ಅವರು, ಸುಮಾರು ೧೦ ವರ್ಷಗಳಿಂದ ಒಕ್ಕೂಟದ ಅಧ್ಯಕ್ಷರಾಗಿದ್ದ ಮಹೇಶ್ವರ ಅವರನ್ನು ಇತ್ತೀಚೆಗೆ ಬದಲಾವಣೆ ಮಾಡಿ ನೂತನ ಅಧ್ಯಕ್ಷೆಯಾಗಿ ತನ್ನನ್ನು ಒಕ್ಕೂಟದ ಸದಸ್ಯರು ಆಯ್ಕೆಮಾಡಿದ್ದಾರೆ. ಮಹೇಶ್ವರ ಅವರನ್ನು ನಿರ್ದೇಶಕರನ್ನಾಗಿ ಮಾಡಲಾಗಿದ್ದರೂ ಕೂಡ ಅಧ್ಯಕ್ಷ ಸ್ಥಾನ ಬದಲಾವಣೆ ಆದ ಅಸಮಾಧಾನದಿಂದ ಅವರು ಕಚೇರಿ ಬೀಗವನ್ನು ಬದಲಿಸಿ ಕೀಯನ್ನು ಕೊಂಡೊಯ್ದಿದ್ದಾರೆ ಎಂದು ಈಶ್ವರಿ ಆರೋಪಿಸಿದರು.
ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಗೆ ಕರೆ ಮಾಡಿದರೂ ಸೂಕ್ತ ಸ್ಪಂದನ ಸಿಗಲಿಲ್ಲ ಎಂದು ಹೇಳಿದರಲ್ಲದೆ, ಈ ಘಟನೆ ಬಗ್ಗೆ ಪೊಲೀಸ್ ದೂರು ನೀಡಲಾಗುವುದು ಎಂದು ತಿಳಿಸಿದರು. ದಿವ್ಯಾಂಗರಿಗೆ ಸೂಕ್ತ ನ್ಯಾಯ ಹಾಗೂ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.