ಕುಶಾಲನಗರ, ಡಿ.೨೭: ಮುಳ್ಳುಸೋಗೆ ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ ಪಂಚಾಯಿತಿಗೆ ಸೇರಿದ ನೀರಿನ ಟ್ಯಾಂಕ್‌ವೊAದನ್ನು ಸ್ಥಳೀಯ ವ್ಯಕ್ತಿಯೊಬ್ಬರು ನೆಲಸಮ ಮಾಡಿ, ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಸದಸ್ಯರೊಬ್ಬರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬಡಾವಣೆಯ ಜೋಡಿ ಬಸವೇಶ್ವರ ದೇವಾಲಯದ ಬಳಿ ೧೯೯೬ ರಲ್ಲಿ ನಿರ್ಮಾಣಗೊಂಡ ಸರ್ಕಾರಕ್ಕೆ ಸೇರಿದ ಟ್ಯಾಂಕ್‌ನ್ನು ದಿನೇಶ್ ಮತ್ತಿತರರು ಸೇರಿ ನೆಲಸಮ ಮಾಡಿದ್ದು, ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲು ಹುನ್ನಾರ ನಡೆದಿದೆ ಎಂದು ಸದಸ್ಯ ಹೆಚ್.ಎನ್ ಮುರಳಿಧರ್, ತಾಲೂಕು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಜನಪ್ರತಿನಿಧಿಯೊಬ್ಬರು ಈ ಪ್ರಕರಣದಲ್ಲಿ ಶಾಮಿಲಾಗಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದು, ಸರ್ಕಾರಿ ಆಸ್ತಿಯನ್ನು ಉಳಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.