ಕುಶಾಲನಗರ, ಡಿ. ೨೭: ಕುಶಾಲನಗರದ ಮಹಾಕಾಳಿ ಖ್ಯಾತಿಯ ಮಹಿಳೆ ಮುಬೀನ್ ತಾಜ್ (೩೮) ಮೃತಪಟ್ಟಿದ್ದಾರೆ. ಖಾಸಗಿ ವಿದ್ಯಾಸಂಸ್ಥೆಯೊAದರ ಮುಖ್ಯಸ್ಥೆಯಾಗಿದ್ದ ಮುಬಿನ್ ತಾಜ್ ಮೂಲತಃ ಸೋಮವಾರಪೇಟೆಯ ನಿವಾಸಿಯಾಗಿದ್ದು, ಕುಶಾಲನಗರದ ಬಿ.ಎಂ ರಸ್ತೆ ವೆಂಕಟೇಶ್ವರ ಥಿಯೇಟರ್ ಬಳಿ ನೆಲೆಸಿದ್ದರು.

ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಮುಬೀನ್ ತಾಜ್ ಮಂಗಳವಾರ ಮನೆಯ ಬಾಗಿಲು ತೆಗೆಯದ ಕಾರಣ ಬಾಡಿಗೆ ಮನೆ ಮಾಲೀಕರು ಬಾಗಿಲು ಒಡೆದು ಒಳ ನೋಡಿದಾಗ ಮುಬೀನ್ ತಾಜ್ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು.

ಮೂಲತಃ ಸೋಮವಾರ ಪೇಟೆಯ ನಿವಾಸಿ ಮುಬಿನ್ ತಾಜ್, ಮೊದಲು ಮಕ್ಕಳಿಗೆ ಪ್ಲೇ ಹೋಮ್ ನಡೆಸುತ್ತಿದ್ದರೆ, ನಂತರ ಶಾಲೆಯ ಜೊತೆಗೆ ಬ್ಯೂಟಿ ಪಾರ್ಲರ್, ಬಟ್ಟೆ ಅಂಗಡಿ ಕೂಡ ನಡೆಸುತ್ತಿದ್ದರು. ಮಹಾಕಾಳಿ ,ಅಕ್ಷರ ಶಕ್ತಿ ಎಂಬ ಹೆಸರಿನೊಂದಿಗೆ ಕುಶಾಲನಗರದಲ್ಲಿ ಹತ್ತು ವರ್ಷಗಳಿಂದ ನನಗೆ ಕಾಳಿ ದೇವಿ ಆವಾಹನೆಯಾಗಿದೆ ಅಂತ ಹೇಳಿಕೊಂಡು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅನುಭವವನ್ನು ಹೇಳಿಕೊಳ್ಳುತ್ತಿದ್ದರು.

ಸ್ಥಳೀಯ ಖಾಸಗಿ ಕಟ್ಟಡ ಒಂದರಲ್ಲಿ ಶಾಲೆ ನಡೆಸುತ್ತಿದ್ದ ಮುಬಿನ್, ನಂತರ ಏಕಾಏಕಿ ತಾನಿರುವ ಕಟ್ಟಡದ ಕೆಳಗಡೆ ಮಹಾಕಾಳಿ ವಿಗ್ರಹಗಳು ಇರುವುದಾಗಿ ಹೇಳಿ ನಂತರ ಮಹಾಕಾಳಿಗೆ ಮೂಲಸ್ಥಾನ ಒದಗಿಸಬೇಕು ಅನ್ನುವ ಮನವಿಗಳು ಕೇಳಿ ಬರಲು ಪ್ರಾರಂಭಗೊAಡಿತು. ಮನವಿಗೆ ಮನೆ ಮಾಲೀಕರು, ಸ್ಥಳೀಯ ಆಡಳಿತ ಸ್ಪಂದಿಸದೆ ಇರುವ ಸಂದರ್ಭ ಕಾನೂನಿನ ಮೊರೆ ಹೋಗಿ ಪಂಚಾಯಿತಿ, ತಹಶೀಲ್ದಾರ್, ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ಸರ್ವೆ ಇಲಾಖೆ, ಪುರಾತತ್ವ ಇಲಾಖೆ ಎಲ್ಲ ಕಡೆ ಪತ್ರ ವ್ಯವಹಾರಗಳು ನಡೆದು ಯಾವುದೇ ಪ್ರಯೋಜನ ಆಗಿರಲಿಲ್ಲ.

ಯಾವುದು ಕೂಡ ಪ್ರಯೋಜನಕ್ಕೆ ಬಾರದ ಸಂದರ್ಭ ತಾನೇ ಮಹಾಕಾಳಿ ಎಂದು ಬಿಂಬಿಸಿ ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ಮುಖ್ಯ ರಸ್ತೆಯಲ್ಲಿ ತೆರಳಿ ಪಂಚಾಯಿತಿ ಕಚೇರಿಯ ಮುಂಭಾಗ ಧರಣಿ ಪ್ರತಿಭಟನೆ ಕೂಡ ನಡೆಸಿದ್ದರು. ಪೊಲೀಸರು ಮಹಾಕಾಳಿಯನ್ನು ಎತ್ತಿಕೊಂಡು ಪೊಲೀಸ್ ಠಾಣೆಗೆ ಹೋಗಿದ್ದೂ ಆಗಿತ್ತು. ಅಂತಿಮವಾಗಿ ಎಷ್ಟೇ ಮನವಿ ಸಲ್ಲಿಸಿದರೂ ತನಗೆ ನ್ಯಾಯ ದೊರೆತಿಲ್ಲ ಎನ್ನುವ ಭಾವನೆಗಳೊಂದಿಗೆ ಬೇಸತ್ತು ಮೈಸೂರು ರಸ್ತೆಯ ಬಳಿ ಬಾಡಿಗೆ ಮನೆಯೊಂದರಲ್ಲಿ ಸೇರಿದ ಅವಿವಾಹಿತೆ ಮುಬಿನ್ ,ಕೊನೆಗೂ ನ್ಯಾಯ ಸಿಗದೆ ಹಾಸಿಗೆ ಹಿಡಿಯುವ ಪರಿಸ್ಥಿತಿ ಬಂದು ಇದೀಗ ಇಹಲೋಕವನ್ನೇ ತ್ಯಜಿಸುವಂತಾಗಿದ್ದು ದುರಂತ ಸಂಗತಿ ಎಂದರೆ ತಪ್ಪಾಗಲಾರದು. -ಸಿಂಚು