*ಸಿದ್ದಾಪುರ, ಡಿ. ೨೫: ವಿವಿಧ ವಿದ್ಯುತ್ ಯೋಜನೆಗಳಡಿ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಬೆಳಕು ನೀಡುವ ಭರವಸೆಯ ಘೋಷವಾಕ್ಯಗಳನ್ನು ಸರ್ಕಾರ ಮೊಳಗಿಸುತ್ತಲೇ ಬಂದಿದೆ. ಆದರೆ ಕೊಡಗಿನ ಕೆಲವು ಗಿರಿಜನ ಕಾಲೋನಿಗಳು ಈ ಭರವಸೆಯ ವ್ಯಾಪ್ತಿಯಿಂದ ಹೊರಗುಳಿದಿವೆ.
ವಾಲ್ನೂರು ಪಂಚಾಯಿತಿ ವ್ಯಾಪ್ತಿಯ ಬಾಳೆಗುಂಡಿ ಗಿರಿಜನ ಕಾಲೋನಿ ಕಳೆದ ೫ ತಿಂಗಳಿನಿAದ ಕತ್ತಲೆಯಲ್ಲಿದೆ. ಜುಲೈ ತಿಂಗಳಿನಲ್ಲಿ ಸುರಿದ ಗಾಳಿಮಳೆಗೆ ವಿದ್ಯುತ್ ಕಂಬ ಮುರಿದು ಬಿದ್ದ
(ಮೊದಲ ಪುಟದಿಂದ) ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಬಗ್ಗೆ ಸೆಸ್ಕ್ ಗಮನಕ್ಕೆ ತಂದಿದ್ದರೂ ಇಲ್ಲಿಯವರೆಗೆ ಹೊಸ ವಿದ್ಯುತ್ ಕಂಬವನ್ನು ಅಳವಡಿಸುವ ಮತ್ತು ವಿದ್ಯುತ್ ಸೌಲಭ್ಯ ಕಲ್ಪಿಸುವ ಕಾಳಜಿಯನ್ನು ಅಧಿಕಾರಿಗಳು ತೋರಿಲ್ಲ.
ಗಿರಿಜನ ಕಾಲೋನಿ ಎನ್ನುವ ಕಾರಣಕ್ಕಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಬೆಳಕಿಲ್ಲದೆ ಕಳೆದ ೫ ತಿಂಗಳಿನಿAದ ಇಲ್ಲಿನ ಮಕ್ಕಳು ನಿತ್ಯ ಪಠ್ಯವನ್ನು ಅಭ್ಯಾಸ ಮಾಡಲು ಪರದಾಡುತ್ತಿದ್ದಾರೆ. ಪಕ್ಕದಲ್ಲೇ ಮೀನುಕೊಲ್ಲಿ ಅರಣ್ಯವಿರುವುದರಿಂದ ಕಾಡಾನೆಗಳ ಸಂಚಾರ ನಿರಂತರವಾಗಿದ್ದು, ಕತ್ತಲೆಯ ಕಾಲೋನಿಯಲ್ಲಿ ನಿವಾಸಿಗಳು ಆತಂಕದಿAದಲೇ ದಿನದೂಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಅರಿತ ಪಂಚಾಯಿತಿ ವಾರ್ಡ್ ಸದಸ್ಯ ಭುವನೇಂದ್ರ ಅವರು ಸೆಸ್ಕ್ ಅಧಿಕಾರಿಗಳಿಗೆ ದೂರು ನೀಡಿ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. -ಅಂಚೆಮನೆ ಸುಧಿ