ಕುಶಾಲನಗರ, ಡಿ. ೨೫: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆ ನಡೆಯಿತು.

ತಾಲೂಕು ಆರೋಗ್ಯ ಕಚೇರಿ ಸಭಾಂಗಣದಲ್ಲಿ ಸಮಿತಿಯ ಉಪಾಧ್ಯಕ್ಷರು ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿರುವ ಜಯವರ್ಧನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಶಾಲನಗರದಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಅವಶ್ಯವಿರುವ ೪ ಎಕರೆ ಜಾಗ ಪಡೆಯಲು ಕಂದಾಯ ಇಲಾಖೆಯೊಂದಿಗೆ ಚರ್ಚಿಸಲು ನಿರ್ಣಯ ಕೈಗೊಳ್ಳಲಾಯಿತು. ಸರ್ವೆ ನಂ. ೬೮ ರ ೧ ಎಕರೆ ಜಾಗವನ್ನು ಲಯನ್ಸ್ ಚಾರಿಟೇಬಲ್ ಸಂಸ್ಥೆಯಿAದ ಹಿಂಪಡೆಯಲು ಕಳೆದ ಸಭೆಯಲ್ಲಿ ಚರ್ಚೆ ನಡೆದಿತ್ತು. ಪ್ರಕರಣ ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿರುವ ಕಾರಣ ಬದಲಿ ಜಾಗ ಹುಡುಕುವಂತೆ ಸಭೆ ನಿರ್ಣಯ ಕೈಗೊಂಡಿತು. ಆಸ್ಪತ್ರೆಯಲ್ಲಿ ಔಷಧಿ ಪೂರೈಕೆ, ಸ್ವಚ್ಛತೆ ಮತ್ತಿತರರ ಅವ್ಯವಸ್ಥೆ ಬಗ್ಗೆ ದೂರುಗಳು ಬಂದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಸಭೆಗೆ ತಿಳಿಸಿದರು. ಸಮಿತಿ ನಾಮ ನಿರ್ದೇಶಿತ ಸದಸ್ಯರುಗಳಾದ ಹೆಚ್.ಎನ್. ರಾಮಚಂದ್ರ, ಎಂ.ಆರ್. ಉತ್ತಪ್ಪ, ಕೆ. ಪ್ರವೀಣ್, ಗೌತಮ್, ಪ್ರಭಾಕರ್, ವೈದ್ಯಾಧಿಕಾರಿ ಡಾ. ಮಧುಸೂದನ್, ಡಾ. ಪ್ರತಿಭಾ ಮತ್ತಿತರ ಅಧಿಕಾರಿಗಳು ಇದ್ದರು.