ಸೋಮವಾರಪೇಟೆ, ಡಿ. ೨೫: ಇಲ್ಲಿನ ಟೀಂ ಎಬಿಡಿ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗಿದ ೨ನೇ ವರ್ಷದ ಎಸ್‌ಪಿಎಲ್ ಕ್ರಿಕೆಟ್ ಪಂದ್ಯಾಟದ ಹಿನ್ನೆಲೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳು, ವಸ್ತು ಪ್ರದರ್ಶನಗಳು ಎಲ್ಲರ ಗಮನ ಸೆಳೆದವು.

ನಾವು ಪ್ರತಿಷ್ಠಾನದ ಸಹಯೋಗ ದೊಂದಿಗೆ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಹಳೆ ನಾಣ್ಯ, ನೋಟು, ಅಂಚೆ ಚೀಟಿಗಳ ಪ್ರದರ್ಶನ ವಿದ್ಯಾರ್ಥಿ ಗಳು ಮಾತ್ರವಲ್ಲ; ಸಾರ್ವಜನಿಕರ ಆಸಕ್ತಿಗೆ ಕಾರಣವಾಯಿತು.

ಕೊಡಗು ನಾವು ಪ್ರತಿಷ್ಠಾನದ ವತಿಯಿಂದ ಚನ್ನಬಸಪ್ಪ ಸಭಾಂಗಣದಲ್ಲಿ ೫೦೦ ವೀರಪುತ್ರರ ಐತಿಹಾಸಿಕ ಅಂಚೆ ಲಕೋಟೆಗಳ ಹಾಗೂ ನಾಣ್ಯಗಳ ಪ್ರದರ್ಶನ ನಡೆಯಿತು. ಕರ್ನಾಟಕ ಬುಕ್ ಆಫ್ ರೆಕಾಡ್ಸ್ ಪ್ರಶಸ್ತಿ ಪುರಸ್ಕೃತ ಹಾಸನದ ಎಚ್.ಕೆ.ಸತೀಶ್ ಅವರು ಪ್ರತಿಯೊಂದು ಅಂಚೆ ಲಕೋಟೆಗಳ ಬಗ್ಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಸವಿಸ್ತಾರ ಮಾಹಿತಿ ಒದಗಿಸಿದರು.

ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಹಾಗೂ ಸುಮನ ಗೌತಮ್ ಅವರ ಆಸಕ್ತಿಯಿಂದ ಅನುಷ್ಠಾನಗೊಂಡ ಈ ಕಾರ್ಯಕ್ರಮಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಯಿತು.

ಇದರೊಂದಿಗೆ ಟೀಂ ಎಬಿಡಿ ವತಿಯಿಂದ ಸೋಮವಾರಪೇಟೆ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಜಿಲ್ಲೆ ಹಾಗೂ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಆಗಮಿಸಿದ ಆರ್‌ಎಕ್ಸ್ ಹಾಗೂ ಯೆಝ್ಡಿ ಬೈಕ್‌ಗಳ ಜಾಥಾ ಪಟ್ಟಣದಲ್ಲಿ ನಡೆಯಿತು.

ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಭಾಗಿಯಾಗಿದ್ದ ನೂರಾರು ಬೈಕ್‌ಗಳು ಪಟ್ಟಣದಲ್ಲಿ ಸಂಚರಿಸಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದವು. ನಂತರ ಮೈದಾನದಲ್ಲಿ ಆರ್‌ಎಕ್ಸ್ ಹಾಗೂ ಯೆಝ್ಡಿ ಬೈಕ್‌ಗಳ ಪ್ರದರ್ಶನ, ನಿಧಾನವಾಗಿ ಬೈಕ್ ಚಾಲಿಸುವ ಸ್ಪರ್ಧೆ, ಮಾರುತಿ ೮೦೦ ಕಾರನ್ನು ಹಿಂದಕ್ಕೆ ಚಾಲಿಸುವ ಸ್ಪರ್ಧೆ, ೧೪ ವರ್ಷದಿಂದ ಒಳಗಿನ ಹಾಗೂ ನಂತರದ ಮಕ್ಕಳಿಗೆ ಎರಡು ವಿಭಾಗದಲ್ಲಿ ನಿಧಾನವಾಗಿ ಸೈಕಲ್ ಚಾಲಿಸುವ ಸ್ಪರ್ಧೆಗಳು ನಡೆದವು.